ಜಯದೇವ ಆಸ್ಪತ್ರೆಯ ಕಾರ್ಯವೈಖರಿಗೆ ಕುಮಾರಸ್ವಾಮಿ ಮೆಚ್ಚುಗೆ

Update: 2019-02-27 14:54 GMT

ಬೆಂಗಳೂರು, ಫೆ.27: ಯಾವುದೇ ಖಾಸಗಿ ಆಸ್ಪತ್ರೆಗಳು ಜಯದೇವ ಆಸ್ಪತ್ರೆಗೆ ಸಮನಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬುಧವಾರ ನಗರದ ಜಯದೇವ ಆಸ್ಪತ್ರೆಯ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯ ನೂತನ ಕಟ್ಟಡ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಯದೇವ ಆಸ್ಪತ್ರೆ, ರೋಗಿಗಳು ಬಂದಾಗ ಹಣಕ್ಕೆ ಆಸೆ ಪಡದೆ ಚಿಕಿತ್ಸೆಗೆ ಆದ್ಯತೆ ನೀಡುವ ಸಂಸ್ಥೆಯಾಗಿದ್ದು, ಆ ಮೂಲಕ ರಾಜ್ಯಕ್ಕೆ ಹೆಸರು ತಂದಿರುವ ಪ್ರತಿಷ್ಠಿತ ಸಂಸ್ಥೆ ಇದಾಗಿದೆ ಎಂದು ಶ್ಲಾಘಿಸಿದರು.

ಸರಕಾರಿ ಆಸ್ಪತ್ರೆಗಳು, ಸರಕಾರಿ ವೈದ್ಯರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ತಮ್ಮ ಕಾಣಿಕೆ ಸಲ್ಲಿಸಬೇಕು. ಜನತೆಯಲ್ಲಿ ಬದುಕಿನ ಕುರಿತು ಹೆಚ್ಚಿನ ಆತ್ಮವಿಶ್ವಾಸ ಹೆಚ್ಚಿಸಬೇಕಾದರೆ ವೈದ್ಯರ ನಡತೆ ಅತಿ ಮುಖ್ಯವಾಗುತ್ತದೆ. ಪ್ರತಿಯೊಬ್ಬ ರೋಗಿಯನ್ನು ತಮ್ಮ ಮನೆಯ ಸದಸ್ಯರೆಂಬಂತೆ ನೋಡಿಕೊಂಡರೆ ಚಿಕಿತ್ಸೆಯಿಲ್ಲದೆಯೆ ಅರ್ಧರೋಗ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು.

ಜಯದೇವ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನಕಳೆದಂತೆ ಹೆಚ್ಚಾಗುತ್ತದೆ. ಹೀಗಾಗಿ ಹೊಸದೊಂದು ಕಟ್ಟಡ ಬೇಕೆಂದು ಕೆಲ ತಿಂಗಳ ಹಿಂದೆ ಜಯದೇವ ಸಂಸ್ಥೆ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು. ಈಗ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಆಸ್ಪತ್ರೆಗೆ ಹೆಚ್ಚಿನ ಹಾಸಿಗೆ ಇರುವ ಕಟ್ಟಡ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ. ಕೇವಲ ಒಂದೇ ವಾರದಲ್ಲಿ ನೀಲನಕ್ಷೆ ತಯಾರಿಸಿ ನೆರವಿಗೆ ಧಾವಿಸಿದ್ದಾರೆಂದು ಅವರು ಮೆಚ್ವುಗೆ ವ್ಯಕ್ತಪಡಿಸಿದರು.

ಉಳಿದಂತೆ ಬಂಡೀಪುರ ಅರಣ್ಯಕ್ಕೆ ಹತ್ತಿರುವ ಕಾಡ್ಗಿಚ್ಚು ಸಂಬಂಧ ಮಾತನಾಡಿದ ಮುಖ್ಯಮಂತ್ರಿಗಳು, ಅರಣ್ಯ ಇಲಾಖೆ ಉತ್ತಮ ಕಾರ್ಯನಿರ್ವಹಣೆ ಮೂಲಕ ಯಶಸ್ವಿಯಾಗಿ ಬೆಂಕಿ ನಂದಿಸಿದೆ. ಈ ವಿಷಯ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಅವರು ಮನವಿ ಮಾಡಿದರು.

ಬಂಡೀಪುರ ಕಾಡಿನ ಬೆಂಕಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ. ಬೆಂಕಿಯಿಂದ ಕಾಡಿನ ಮರಗಳಿಗೆ ಹೆಚ್ಚು ಅಪಾಯವಾಗಿಲ್ಲ. ನೆಲದ ಮೇಲಿನ ಹುಲ್ಲು ಸುಟ್ಟುಹೋಗಿದೆ. 750 ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಭಾಗಿಯಾಗಿದ್ದರು. ವೈಮಾನಿಕ ಸಮೀಕ್ಷೆ ನಡೆಸಿ ಮಾಹಿತಿ ಪಡೆಯಲಿದ್ದೇನೆ. ಇಂತಹ ಸಂದರ್ಭಗಳನ್ನು ಸರಕಾರ ಯಶಸ್ವಿಯಾಗಿ ನಿಭಾಯಿಸಲಿದೆ ಎಂದು ಅವರು ತಿಳಿಸಿದರು.

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಮಾತನಾಡಿ, ಈಗಾಗಲೇ ಜಯದೇವ ಆಸ್ಪತ್ರೆ 700 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಇಷ್ಟು ದೊಡ್ಡ ಪ್ರಮಾಣದ ಹೃದಯರೋಗ ಆಸ್ಪತ್ರೆ ಇದೇ ಮೊದಲು. ಹೊಸ ಆಸ್ಪತ್ರೆ ಕಟ್ಟಡ 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕಟ್ಟಡದ ಪೂರ್ಣ ಹೊಣೆಯನ್ನು ಇನ್ಫೋಸಿಸ್ ಸಂಸ್ಥೆ ವಹಿಸಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ, ಶಾಸಕಿ ಸೌಮ್ಯಾರೆಡ್ಡಿ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News