ನ್ಯಾಯಾಂಗದಲ್ಲಿ ಒತ್ತಡ ಹೆಚ್ಚಾಗುತ್ತಿದೆ: ಎಚ್.ಎನ್.ನಾಗಮೋಹನ್‌ ದಾಸ್

Update: 2019-02-27 15:40 GMT

ಬೆಂಗಳೂರು, ಫೆ.27: ಇತ್ತೀಚಿನ ದಶಕಗಳಲ್ಲಿ ನ್ಯಾಯಮೂರ್ತಿಗಳು ಒತ್ತಡದಲ್ಲಿ ಕೆಲಸ ಮಾಡುವ, ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುವ ವಾತಾವರಣ ನಿರ್ಮಾಣವಾಗುತ್ತಿದೆ. ಇದರಿಂದ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆ ಉಂಟಾಗಲಿದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ ದಾಸ್ ಅಭಿಪ್ರಾಯಪಟ್ಟಿದ್ದಾರೆ. 

ಬುಧವಾರ ಹೈಕೋರ್ಟ್ ಸಭಾಂಗಣ-1ರಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಕೀರ್ತಿಶೇಷರಾದ ನ್ಯಾಯಮೂರ್ತಿ ಎಚ್.ಆರ್.ಖನ್ನಾ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಎಚ್.ಆರ್.ಖನ್ನಾ ಅವರು ಕೇಶವಾನಂದ ಭಾರತಿ ಪ್ರಕರಣ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಮಹತ್ವದ ಆದೇಶಗಳನ್ನು ನೀಡಿ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಅದೇ ರೀತಿಯಾಗಿ ಈಗಿನ ನ್ಯಾಯಮೂರ್ತಿಗಳೂ ಯಾವುದೆ ಒತ್ತಡಕ್ಕೆ ಮಣಿಯದೇ ಎಚ್.ಆರ್.ಖನ್ನಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕೆಂದು ಸಲಹೆ ನೀಡಿದರು.

ಎಚ್.ಆರ್.ಖನ್ನಾ ಅವರು ಮಹತ್ವದ ಆದೇಶಗಳನ್ನು ಪ್ರಕಟಿಸುವಾಗ ಸಂವಿಧಾನದ ಮೂಲತತ್ವಕ್ಕೆ ಯಾವುದೇ ಧಕ್ಕೆ ಬಾರದ ಹಾಗೇ ಸಂಸತ್ತಿನಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ತರಬೇಕೆಂದು ಹೇಳುತ್ತಿದ್ದರು. ಹೀಗಾಗಿಯೆ ಈ ದೇಶದಲ್ಲಿ ಇನ್ನೂ ಸಾಮಾಜಿಕ ನ್ಯಾಯ, ಮೂಲಭೂತ ಹಕ್ಕು, ಪ್ರಜಾಪ್ರಭುತ್ವ ಉಳಿದುಕೊಂಡಿದ್ದು, ನಾವೆಲ್ಲರೂ ಉನ್ನತ ಸ್ಥಾನದಲ್ಲಿ ಕುಳಿತು ಜನರ ಸೇವೆ ಮಾಡಲು ಸಾಧ್ಯವಾಯಿತು ಎಂದು ತಿಳಿಸಿದರು.

ಸಂವಿಧಾನದ ಮೂಲತತ್ವಗಳನ್ನು ಅನುಷ್ಠಾನಗೊಳಿಸುವ ಅವಶ್ಯಕತೆಯಿದ್ದು, ಆ ನಿಟ್ಟಿನಲ್ಲಿ ಯುವ ವಕೀಲರು ಸಂವಿಧಾನದ ಮೂಲತತ್ವಗಳನ್ನು ಜನರಿಗೆ ಓದಿ ತಿಳಿಸಬೇಕು. ಹಾಗೆಯೇ ಎಚ್.ಆರ್.ಖನ್ನಾ ಅವರ ಕುರಿತ ಕೃತಿಗಳನ್ನು ಓದಿ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಅಲ್ಲದೆ, ಖನ್ನಾ ಅವರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಜನರ ಮೂಲಭೂತ ಹಕ್ಕುಗಳಿಗೆ ನಿರ್ಬಂಧ ಹೇರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಅವರ ಜೊತೆಗಿದ್ದ ಉಳಿದ ನಾಲ್ವರು ನ್ಯಾಯಮೂರ್ತಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳಿಗೆ ನಿರ್ಬಂಧ ಹೇರಿರುವುದು ಸರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಿಂದ, ಖನ್ನಾ ಅವರ ಅಭಿಪ್ರಾಯಕ್ಕೆ ಸೋಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನ್ಯಾಯಮೂರ್ತಿಗಳು ಸ್ಪಷ್ಟವಾಗಿ ತೀರ್ಪುಗಳನ್ನು ನೀಡದೆ, ಮತ್ತೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News