ಅರಣ್ಯ ವಾಸಿಗಳು, ಬುಡಕಟ್ಟು ಜನರನ್ನು ಒಕ್ಕಲೆಬ್ಬಿಸಲು ನೀಡಿದ್ದ ಆದೇಶಕ್ಕೆ ತಡೆ ಹೇರಿದ ಸುಪ್ರೀಂ ಕೋರ್ಟ್

Update: 2019-02-28 10:05 GMT

ಬೆಂಗಳೂರು :  ಅರಣ್ಯ ಹಕ್ಕುಗಳ ಕಾಯಿದೆ 2006 ಅನ್ವಯ  ಅರಣ್ಯ ವಾಸಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೆ ತಾವು  ವಾಸಿಸುವ ಅರಣ್ಯ ಭೂಮಿಯ ಮೇಲೆ ಹಕ್ಕಿಲ್ಲ ಎಂದು ಹೇಳಿ ಹಲವಾರು ಲಕ್ಷ ಮಂದಿಯನ್ನು ಒಕ್ಕಲೆಬ್ಬಿಸಲು ಆದೇಶಿಸಿ ಸುಪ್ರೀಂ ಕೋರ್ಟ್ ಫೆಬ್ರವರಿ 13ರಂದು ಹೊರಡಿಸಿದ ಆದೇಶಕ್ಕೆ ತಿದ್ದುಪಡಿ ತರುವಂತೆ ಕೋರಿ ಕೇಂದ್ರ  ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸಲ್ಲಿಸಿದ್ದ ಅಪೀಲನ್ನು ಪರಿಗಣಿಸಿ ನ್ಯಾಯಾಲಯ ತನ್ನ ಈ ಹಿಂದಿನ ಆದೇಶವನ್ನು ವಜಾಗೊಳಿಸಿದೆ. ಸುಪ್ರೀಂ ಕೋರ್ಟಿನ ಈ ಹಿಂದಿನ ಆದೇಶ ಜಾರಿಯಾಗುತ್ತಿದ್ದರೆ 21 ರಾಜ್ಯಗಳ ಸುಮಾರು 11.8 ಲಕ್ಷ ಅರಣ್ಯ ವಾಸಿಗಳು ತಮ್ಮ ವಾಸ ಸ್ಥಳಗಳನ್ನು ಕಳೆದುಕೊಳ್ಳುತ್ತಿದ್ದರು.

ಜಸ್ಟಿಸ್ ಅರುಣ್ ಮಿಶ್ರಾ ಹಾಗೂ ಜಸ್ಟಿಸ್ ನವೀನ್ ಸಿನ್ಹಾ ಅವರು ಈ ಆದೇಶ ಹೊರಡಿಸಿದರಲ್ಲದೆ  ಕೆಲವು ಅರಣ್ಯ ವಾಸಿಗಳ ಭೂಮಿಗಳ ಮೇಲಿನ ಹಕ್ಕುಗಳನ್ನು ತಿರಸ್ಕರಿಸಲು ರಾಜ್ಯ ಸರಕಾರಗಳು ಅನುಸರಿಸಿರುವ ಮಾನದಂಡಗಳ ಕುರಿತಾದ ಮಾಹಿತಿ ಹೊಂದಿರುವ ಅಫಿಡವಿಟ್ ಅನ್ನು ನಾಲ್ಕು ತಿಂಗಳುಗಳೊಳಗಾಗಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜುಲೈ 10ಕ್ಕೆ ನಿಗದಿ ಪಡಿಸಿದೆ.

ಅಫಿಡವಿಟ್ ಅನ್ನು ರಾಜ್ಯ ಸರಕಾರಗಳ ಮುಖ್ಯ ಕಾರ್ಯದರ್ಶಿಗಳು ಸಲ್ಲಿಸಬೇಕು ಹಾಗೂ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಲು ಕೈಗೊಂಡ ವಿವರಗಳನ್ನು ನೀಡುವಂತೆಯೂ ಹೇಳಿದೆ.

ಫೆಬ್ರವರಿ 13ರ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ಕದ ತಟ್ಟಿ ಅರಣ್ಯ ಹಕ್ಕುಗಳ ಕಾಯಿದೆಯನ್ನು  ಉದಾರವಂತಿಕೆಯಿಂದ ಪರಿಗಣಿಸಿ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದ ಬಡವರಿಗೆ  ಸಹಾಯ ಮಾಡುವಂತೆ ಕೋರಿತ್ತು.

ತನ್ನ ಹಿಂದಿನ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿರುವ ಹೊರತಾಗಿಯೂ ನ್ಯಾಯಾಲಯ ಕೇಂದ್ರದ ಅಪೀಲಿನ ಬಗ್ಗೆ ಅಸಹನೆ ತೋರಿ “ನೀವು ನಿದ್ದೆಯಲ್ಲಿದ್ದಿರೇನು? ಈ ಹಿಂದೆ ಆದೇಶ ಹೊರಡಿಸಿದಾಗ ಎಲ್ಲಿದ್ದಿರಿ? ನಿದ್ದೆಯಲ್ಲಿದ್ದುಕೊಂಡು ನಂತರ ಎದ್ದು ಬಂದು ತಿದ್ದುಪಡಿ ಕೋರುತ್ತೀರಿ. ನಿಮಗೆ ಈಗ ಎಚ್ಚರವಾಗುತ್ತಿದೆ,'' ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News