ಸೇನಾ ಕಾರ್ಯಾಚರಣೆಯನ್ನು ಪ್ರಧಾನಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು: ಸಿಎಂ ಕುಮಾರಸ್ವಾಮಿ
ಬೆಂಗಳೂರು, ಫೆ.28: ಉಗ್ರರ ಮೇಲೆ ಭಾರತೀಯ ಸೈನ್ಯ ನಡೆಸಿರುವ ಕಾರ್ಯಾಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಪ್ರಚಾರ ಕಾರ್ಯಕ್ರಮವಾಗಿ ಬಳಸಿಕೊಳ್ಳುತ್ತಿರುವುದು ನಾಚಿಗೇಡಿನ ಸಂಗತಿಯೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಲಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ನೆಹರೂ ಕಾಲದಲ್ಲೂ ಯುದ್ಧಗಳಾಗಿತ್ತು. ಆದರೆ, ಅವರು ಯಾರೂ ರಾಜಕೀಯಕ್ಕಾಗಿ ಬಳಸಿಕೊಂಡಿರಲಿಲ್ಲ. ಆದರೆ, ನರೇಂದ್ರ ಮೋದಿ ಸರಕಾರ ಇದನ್ನು ಪಕ್ಷದ ಬೆಳವಣಿಗೆಗಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು. ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಾರ್ಥಕ್ಕಾಗಿ ಯೋಧರನ್ನು ಯುದ್ದಕ್ಕೆ ಕಳುಹಿಸಿ, ಅವರ ಕುಟುಂಬದವರನ್ನು ಅನಾಥರನ್ನಾಗಿ ಮಾಡುತ್ತಿದ್ದಾರೆ. ಪತ್ನಿಯರನ್ನು ವಿಧವೆಯಾಗಿ ಮಾಡುತ್ತಿದ್ದಾರೆ. ಯೋಧರು ಗಡಿ ದಾಟಿ ಬಾಂಬ್ ಹಾಕಿ ಬಂದರೆ ಬಿಜೆಪಿ ಪಕ್ಷದವರು ತಾವೇ ಬಾಂಬ್ ಹಾಕಿ ಬಂದಂತೆ ಸಂಭ್ರಮಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ಸಂಪುಟ ವಿಸ್ತರಣೆ ಇಲ್ಲ: ಸಚಿವ ಸಂಪುಟದಲ್ಲಿ ಖಾಲಿ ಇರುವ ಜೆಡಿಎಸ್ ಪಕ್ಷದ ಪಾಲಿನ ಸ್ಥಾನಗಳನ್ನು ಭರ್ತಿ ಮಾಡಿ, ಸಂಪುಟ ವಿಸ್ತರಣೆಯಾಗಲಿದೆಯೇ ಎಂಬ ವದಂತಿಗಳನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಸದ್ಯಕ್ಕೆ ಸಂಪುಟ ವಿಸ್ತರಣೆ ಇಲ್ಲ. ಸೂಕ್ತ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದರು.
ಕನ್ನಡಿಗರು ಪ್ರಧಾನಿ ಯಾಕಾಗಬಾರದು?
ಕನ್ನಡಿಗರು ಪ್ರಧಾನಿಯಾಗುವ ವಿಚಾರ ಕುರಿತು ಮಾತನಾಡಿದ ಸಿಎಂ ಕುಮಾರಸ್ವಾಮಿ, ‘‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕನ್ನಡಿಗರು ಪ್ರಧಾನಿ ಯಾಕಾಗಬಾರದು?’’ ಎಂದು ಪ್ರಶ್ನೆ ಮಾಡಿದರು.