×
Ad

ಪ್ರತಿ ಹನಿ ನೀರು ಸಂರಕ್ಷಣೆಯಾಗಲಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-02-28 19:42 IST

ಬೆಂಗಳೂರು, ಫೆ.28: ಪ್ರತಿ ಹನಿ ನೀರು ಅತ್ಯಮೂಲ್ಯ ಎಂಬ ಭಾವನೆ ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ತಿಳಿಯುವಂತಾದಾಗ ಮಾತ್ರ ನೀರಿನ ಸಂರಕ್ಷಣೆ ಸಾಧ್ಯವೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಲಾಮೃತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲ ಮಿಂಚಿ ಹೋಗುವ ಮುನ್ನ ನೀರನ್ನು ಸಂರಕ್ಷಿಸುವ ಕಡೆಗೆ ನಮ್ಮೆಲ್ಲರ ಗಮನವಿರಲಿ ಎಂದು ಹೇಳಿದರು.

ಮುಂದೊಂದು ದಿನ ನೀರಿಗಾಗಿ ಯುದ್ಧ ನಡೆಯಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಅಷ್ಟರ ಮಟ್ಟಿಗೆ ಭೂಮಿಯ ಮೇಲೆ ನೀರಿನ ಅಭಾವ ಕಾಣಿಸಿಕೊಳ್ಳಬಹುದೆಂದು ಊಹಿಸಲಾಗಿದೆ. ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯ ರಾಜ್ಯಗಳ ನಡುವೆ ಸಂಘರ್ಷಗಳು ನಡೆಯುತ್ತಿವೆ. ಹೀಗಾಗಿ ನೀರಿನ ಪ್ರಾಮುಖ್ಯತೆಯನ್ನು ಎಲ್ಲರು ಮನಗಾಣಬೇಕೆಂದು ಅವರು ಹೇಳಿದರು.

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅತಿ ಹೆಚ್ಚು ಚೆಕ್ ಡ್ಯಾಂಗಳನ್ನು ನಿರ್ಮಿಸುವ ಗ್ರಾಮ ಪಂಚಾಯತ್‌ಗಳಿಗೆ ಒಂದು ಕೋಟಿ ರೂ.ಬಹುಮಾನ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ನೀರಿನ ಮಹತ್ವದ ಬಗ್ಗೆ ಕೋಲಾರ, ಚಿಕ್ಕಬಳ್ಳಾರಪುರ ಜಿಲ್ಲೆಗಳ ಜನತೆಗೆ ಗೊತ್ತಿರುವಷ್ಟು ಇತರೆ ಜಿಲ್ಲೆಯ ಜನತೆಗೆ ಗೊತ್ತಿಲ್ಲ. ನೀರಿನ ಕೊರತೆಯ ನಡುವೆಯು ಅಲ್ಲಿನ ರೈತರು ಉತ್ತಮ ಬೆಳೆಗಳನ್ನು ಬೆಳೆದು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಈ ಭಾಗದ ಯಾವ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಅವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಸತತ ಬರಗಾಲದಿಂದಾಗಿ ಕರ್ನಾಟಕದಲ್ಲಿ ಜಲಕ್ಷಾಮ ತಲೆದೋರಿದೆ. ಹೀಗಾಗಿ ಪ್ರತಿ ಹನಿ ನೀರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜಲಾಮೃತ ಯೋಜನೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

ಜಲ ಸಾಕ್ಷರತೆ, ಜಲ ಸಂರಕ್ಷಣೆ, ಜಲ ಪ್ರಜ್ಞೆ ಮತ್ತು ಹಸಿರೀಕರಣ ಈ ಅಂಶಗಳನ್ನಿಟ್ಟು ಜಲಾಮೃತ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಈ ವೇಳೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತಿತರರಿದ್ದರು.

ಅಂತರ್‌ಜಲ ಸಂರಕ್ಷಿಸುವುದಕ್ಕಾಗಿ ನದಿ ಹಾಗೂ ನೀರು ಹರಿಯುವ ಕಾಲುವೆಗಳ ಸಮೀಪ ಬೋರ್‌ವೆಲ್ ಹಾಕುವುದನ್ನು ನಿಷೇಧಿಸಲು ಕಾಯ್ದೆ ಜಾರಿಗೊಳಿಸುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ.

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News