ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಪ್ರಶಾಂತ್ ಹತ್ಯೆ
ಬೆಂಗಳೂರು, ಫೆ.28: ನಗರದಲ್ಲಿ ಕುಖ್ಯಾತ ರೌಡಿ ಪ್ರಶಾಂತನನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಹೊರಮಾವು ಬಳಿಯ ಕಲ್ಯಾಣ ನಗರದಲ್ಲಿ ನಡೆದಿದೆ.
ಇಲ್ಲಿನ ಕಲ್ಯಾಣನಗರದ ಫ್ಲವರ್ ಗಾರ್ಡನ್ ಪ್ರಶಾಂತ್(32) ಅಲಿಯಾಸ್ ಪ್ರಶಾಂತ್ ಕುಮಾರ್ ನಿನ್ನೆ ರಾತ್ರಿ 11.45ರ ವೇಳೆ ಸ್ನೇಹಿತ ಉದಯ್ ಕುಮಾರ್ ಜೊತೆ ಬೈಕ್‌ನಲ್ಲಿ ಕಲ್ಯಾಣ ನಗರದ 100 ಅಡಿ ರಸ್ತೆಯ ಹೊರಮಾವು ಜಂಕ್ಷನ್ ಬಳಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಐದಾರು ಮುಸುಕುಧಾರಿಗಳು ಅಡ್ಡಗಟ್ಟಿದ್ದಾರೆ. ಮಾರಕಾಸ್ತ್ರಗಳನ್ನು ಹಿಡಿದು ಬಂದ ದುಷ್ಕರ್ಮಿಗಳನ್ನು ನೋಡಿ ಪ್ರಶಾಂತ್ ಓಡಿ ಹೋದಾಗ ಅಟ್ಟಿಸಿಕೊಂಡು ಹೋಗಿ ಮಾರಕಾಸ್ತ್ರಗಳಿಂದ ಹೊಡೆದು ಕೆಳಗೆ ಬೀಳಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕಲ್ಲಿನಿಂದ ನಡೆಸಿದ ಹಲ್ಲೆಯಿಂದ ಪ್ರಶಾಂತ್‌ರ ತಲೆ ಛಿದ್ರ ಛಿಧ್ರವಾಗಿದ್ದು, ಗುರುತು ಸಿಗದಂತಾಗಿದೆ.
ಕೊಲೆ, ಸುಲಿಗೆ, ಕೊಲೆಯತ್ನ ಸೇರಿದಂತೆ 12ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಪ್ರಶಾಂತ್ ಮಾರತಹಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ. ಕೆಆರ್‌ಪುರಂ, ಎಚ್‌ಎಎಲ್, ಮಾರತಹಳ್ಳಿಯ ಭಾಗದಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಎಂದು ಡಿಸಿಪಿ ರಾಹುಲ್‌ಕುಮಾರ್ ಶಹಪುರವಾಡ ಹೇಳಿದ್ದಾರೆ.
ಪ್ರಶಾಂತ್ ಕುಮಾರ್ ಹಾಗೂ ಅವರ ಅಣ್ಣ ವಿನೋದ್ ರಾಜ್ ಸೇರಿ ಕೊಲೆ ಯತ್ನ, ಗಲಾಟೆ, ಬೆದರಿಕೆ, ಕೊಲೆ, ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಈ ಇಬ್ಬರೂ ಸೇರಿ ಕುಡಿಯುವ ನೀರಿನ ಕ್ಯಾನ್‌ಗಳ ಉದ್ಯಮ ನಡೆಸುತ್ತಿದ್ದರು. ವ್ಯವಹಾರದ ವಿಷಯವಾಗಿ ಶಿವರಾಜ್ ಸ್ಟಾಲಿನ್ ಹಾಗೂ ಪ್ರವೀಣ್ ಎಂಬುವರ ನಡುವೆ ವೈಮನಸ್ಸು ಉಂಟಾಗಿತ್ತು.
ಇದು ಜಗಳಕ್ಕೆ ತಿರುಗಿ ವಿನೋದ್ ರಾಜ್‌ನನ್ನು ಕೊಲೆ ಮಾಡಿದ ಶಿವರಾಜ್ ಸಹಚರರಾದ ಸ್ಟಾಲಿನ್ ಹಾಗೂ ಪ್ರವೀಣ್ ಜೈಲು ಸೇರಿದ್ದರು. ಅಣ್ಣನ ಕೊಲೆಯ ನಂತರ ಕುಡಿಯುವ ನೀರಿನ ಉದ್ಯಮ ಬಿಟ್ಟ ಪ್ರಶಾಂತ್, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಜೈಲು ಸೇರಿದ್ದ ಶಿವರಾಜನ ಸಹಚರರಾದ ಕಾಡುಬೀಸನಹಳ್ಳಿಯ ಲೋಕಿ, ಸ್ಟಾಲಿನ್, ಪ್ರವೀಣ್, ಬಸವರಾಜು, ಕಿಶೋರ್, ಸುನಿಲ್ ಮೈಲಾರಿ ಇನ್ನಿತರರು ಪ್ರಶಾಂತ್ ಜೊತೆ ಜಗಳ ಮಾಡುತ್ತ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಅಡ್ಡಿಪಡಿಸುತ್ತಿದ್ದರು.
ಕಳೆದ 4 ತಿಂಗಳ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ಶಿವರಾಜ್, ಕೊಲೆ ಪ್ರಕರಣವನ್ನು ವಾಪಸ್ಸು ತೆಗೆದುಕೊಳ್ಳುವಂತೆ ಪ್ರಶಾಂತ್ ಅವರ ತಾಯಿ ಮೇನಕಮ್ಮ ಅವರಿಗೆ ಒತ್ತಡ ಹಾಕಿ ಹಣಕಾಸಿನ ಆಮಿಷವೊಡ್ಡಿದ್ದರು. ಇದಕ್ಕೆ ಪ್ರಶಾಂತ್ ಹಾಗೂ ತಾಯಿ ಒಪ್ಪಿರಲಿಲ್ಲ. ಇದರಿಂದ ಆಕ್ರೋಶಗೊಂಡ ಶಿವರಾಜ್, ಸುಪಾರಿ ಕೊಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಕಳೆದ ಫೆ. 24ರಂದು ಇಂದಿರಾ ನಗರಕ್ಕೆ ಕೆಲಸದ ಮೇಲೆ ಹೋಗಿದ್ದ ಪ್ರಶಾಂತ್ ಮೇಲೆ ಶಿವರಾಜ್ ಕಡೆಯವರು ದಾಳಿ ನಡೆಸಿದ್ದರು. ಗಾಯಗೊಂಡು ತಪ್ಪಿಸಿಕೊಂಡು ಬಂದಿದ್ದ ಪ್ರಶಾಂತ್ ಪೊಲೀಸರಿಗೆ ದೂರು ನೀಡಿರಲಿಲ್ಲ. ನಿನ್ನೆ ರಾತ್ರಿ 11ರ ಸುಮಾರಿಗೆ ಮನೆಯಿಂದ ಹೊರಗೆ ಹೋದ ಪ್ರಶಾಂತ್ ಕೊಲೆಯಾಗಿದೆ. ಈ ಸಂಬಂಧ ಪ್ರಶಾಂತ್ ಪತ್ನಿ ನೀಡಿರುವ ದೂರು ದಾಖಲಿಸಿಕೊಂಡಿರುವ ಬಾಣಸವಾಡಿ ಪೊಲೀಸರು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.