×
Ad

ಉದ್ಯೋಗ ಸೃಷ್ಟಿಗೆ ಪ್ರದಾನ ಆದ್ಯತೆ ಇರಲಿ: ರಾಮಲಿಂಗಾರೆಡ್ಡಿ

Update: 2019-02-28 20:01 IST

ಬೆಂಗಳೂರು, ಫೆ.28: ಉದ್ಯೋಗ ಪ್ರತಿಯೊಬ್ಬರ ಅವಶ್ಯಕತೆಯಾಗಿದ್ದು, ಉದ್ಯೋಗ ಸೃಷ್ಟಿಗೆ ಪ್ರದಾನ ಆದ್ಯತೆ ನೀಡಬೇಕಾಗಿದೆ ಎಂದು ಶಾಸಕ ರಾಮಲಿಂಗಾರೆಡ್ಡಿ ತಿಳಿಸಿದರು.

ಗುರುವಾರ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾಗಿ ಆಯೋಜಿಸಿದ್ದ ಪ್ರಿಯದರ್ಶಿನಿ ಬೃಹತ್ ಕೌಶಲ್ಯ ಮತ್ತು ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಹೊಸ ಕಂಪೆನಿಗಳು ತಲೆ ಎತ್ತಿದಾಗ ಮಾತ್ರ ಉದ್ಯೋಗ ಸೃಷ್ಟಿಸಲು ಸಾಧ್ಯ. ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿದು ಬಂದಲ್ಲಿ ಮಾತ್ರ ಉದ್ಯೋಗ ಸೃಷ್ಟಿಗೆ ಸೂಕ್ತ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಇಡೀ ದೇಶದಲ್ಲಿಯೇ ಕರ್ನಾಟಕದಲ್ಲಿ ಹೂಡಿಕೆಗೆ ಪ್ರಶಸ್ತವಾದ ವಾತಾವರಣವಿದೆ. ಇದನ್ನು ಹೂಡಿಕೆದಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಉದ್ಯೋಗದಾತರು ಮತ್ತು ಉದ್ಯೋಗ ಆಕಾಂಕ್ಷಿಗಳ ನಡುವೆ ಉತ್ತಮ ಬಾಂಧವ್ಯ ಅಗತ್ಯವಾಗಿದೆ. ಇದಕ್ಕಾಗಿ ಹೊಸ ಹೊಸ ಆಯಾಮಗಳನ್ನು ಪರಿಶೋಧಿಸಿ ಉದ್ಯಮಶೀಲ ವಾತಾವರಣಕ್ಕೆ ಗಮನಹರಿಸಬೇಕು. ಅವಕಾಶ ಸೃಷ್ಟಿಸಿಕೊಟ್ಟರೆ ಮಾತ್ರ ಯುವ ಸಮೂಹಕ್ಕೆ ಅನುಕೂಲವಾಗುವ ಜತೆಗೆ ರಾಜ್ಯದ ಬೆಳವಣಿಗೆಗೂ ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಾಸಕಿ ಸೌಮ್ಯಾರೆಡ್ಡಿ ಮಾತನಾಡಿ, ಉದ್ಯೋಗ ಕ್ಷೇತ್ರದಲ್ಲೂ ಮಹಿಳೆಯರಿಗೆ ಮೀಸಲಾತಿ ಸಿಗುವಂತಾಗಬೇಕು. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿಯೇ ಮಹಿಳೆಯರಿಗಾಗಿಯೇ ವಿಶೇಷವಾಗಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿದ್ಯಾವಂತರು ಪಕೋಡ ಮಾರಿ ಜೀವನ ಸಾಗಿಸುವಂತೆ ಬಿಜೆಪಿ ರಾಷ್ಟ್ರೀಯ ನಾಯಕರು ಸಲಹೆ ನೀಡುತ್ತಾರೆ. ಎಲ್ಲರೂ ಪಕೋಡ ಮಾರಾಟ ಮಾಡಿದರೆ ಅದನ್ನು ಖರೀದಿಸುವವರು ಯಾರು ಎಂದು ಪ್ರಶ್ನಿಸಿದ ಸೌಮ್ಯ ರೆಡ್ಡಿ, ಉದ್ಯೋಗ ಸೃಷ್ಟಿಗೆ ಸೂಕ್ತ ಯೋಜನೆ ರೂಪಿಸಬೇಕು. ಮಹಿಳೆಯರಿಗೆ ಉದ್ಯೋಗ ದೊರೆತರೆ ಅಂತಹ ಕುಟುಂಬಗಳು ಆರ್ಥಿಕವಾಗಿ ಸಶಕ್ತ, ಸ್ವಾವಂಲಬಿಗಳಾಗುತ್ತವೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ಮಹಿಳೆಯರಿಗಾಗಿ ಪ್ರಿಯದರ್ಶಿನಿ ಹೆಸರಿನಲ್ಲಿ ಉದ್ಯೋಗ ಮೇಳ ಆಯೋಜಿಸುತ್ತಿರುವುದು ಅತ್ಯಂತ ಉತ್ತಮ ಕೆಲಸವಾಗಿದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಸ್ಥಾನಮಾನ ದೊರೆಯುವಂತಾಗಬೇಕು. ರಾಜಕೀಯ ಕ್ಷೇತ್ರಕ್ಕೂ ಸಹ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆಯಬೇಕು ಎಂದರು.

ಉದ್ಯೋಗ ಮೇಳದಲ್ಲಿ 120ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಂಡಿದ್ದವು. ಗೃಹಿಣಿಯರು, ವಿದ್ಯಾರ್ಥಿನಿಯರು, ನಿರುದ್ಯೋಗಿ ಮಹಿಳೆಯರು ತಮ್ಮ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ರೀತಿಯ ಉದ್ಯೋಗಗಳನ್ನು ಪಡೆದುಕೊಂಡರು. ಕೆಲವರು ತಮಗೆ ಇಷ್ಟವಾಗುವ ಉದ್ಯೋಗ ಪಡೆಯಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಬೈರಸಂದ್ರವಾರ್ಡ್‌ನ ಸದಸ್ಯ ಎನ್.ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು. 

ಪುರುಷರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಅವಕಾಶ ಹೆಚ್ಚಿರುತ್ತದೆ. 225 ಮಂದಿಯ ರಾಜ್ಯ ವಿಧಾನಸಭೆಯ ಸಂಖ್ಯಾಬಲದಲ್ಲಿ ಕೇವಲ ಆರು ಜನ ಮಹಿಳಾ ಶಾಸಕಿಯರಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ

-ಸೌಮ್ಯಾರೆಡ್ಡಿ ಶಾಸಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News