ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯ: ಸಚಿವ ಡಿ.ಕೆ ಶಿವಕುಮಾರ್
Update: 2019-02-28 20:10 IST
ಬೆಂಗಳೂರು, ಫೆ.28: ಈಗಿನ ಕಾಲಕ್ಕೆ ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯವಾಗಿದೆ. ಆದುದರಿಂದ, ಮುಖ್ಯಮಂತ್ರಿ ಧೈರ್ಯವಾಗಿ ಹೋಬಳಿಗೊಂದು ಸರಕಾರಿ ಆಂಗ್ಲ ಮಾಧ್ಯಮ ಶಾಲೆಯನ್ನು ತೆರೆಯುವ ನಿರ್ಧಾರ ಮಾಡಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಕನ್ನಡ, ಕನ್ನಡ ಎಂದು ಮಾತನಾಡುತ್ತಿದ್ದಾರೆ. ಸುಮ್ಮನೆ ಖಾಲಿ ಕುಳಿತುಕೊಂಡು ಇಂಗ್ಲಿಷ್ ಬೇಡವೇ ಬೇಡ ಎಂದು ಏನೇನೊ ಮಾತನಾಡುತ್ತಿದ್ದಾರೆ ಎಂದರು.
ಕನ್ನಡ ಎಂದು ಮಾತನಾಡುತ್ತಿರುವವರ ಮಕ್ಕಳೆಲ್ಲ ಕನ್ನಡ ಮಾಧ್ಯಮದಲ್ಲೇ ಓದಿದ್ದಾರಾ? ಅವರ ಮಕ್ಕಳೆಲ್ಲ ಇಂಗ್ಲಿಷ್ ಮಾಧ್ಯಮದಲ್ಲೆ ಓದುತ್ತಿದ್ದಾರೆ. ಬಡವರ ಮಕ್ಕಳಿಗೆ ಇಂಗ್ಲಿಷ್ ಜ್ಞಾನ ಬೇಡವೇ ಎಂದು ಅವರು, ಇಂಗ್ಲಿಷ್ ಮಾಧ್ಯಮ ವಿರೋಧಿಸುವವರ ವಿರುದ್ಧ ಕಿಡಿಗಾರಿದರು.