ದೇಶದ ಭದ್ರತೆಯ ವಿಚಾರ ರಾಜಕೀಯ ಲಾಭಕ್ಕಾಗಿ ಬಳಸುವುದು ಸರಿಯಲ್ಲ: ಈಶ್ವರ್ ಖಂಡ್ರೆ
ಬೆಂಗಳೂರು, ಫೆ. 28: ದೇಶದ ಭದ್ರತೆ, ಉಗ್ರರ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ಇರಬೇಕಿದೆ. ಆದರೆ, ಬಿಜೆಪಿ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ಷೇಪಿಸಿದ್ದಾರೆ.
ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಷ್ಟ್ರದ ಏಕತೆ, ಸುರಕ್ಷತೆ, ಅಖಂಡತೆ ವಿಚಾರದಲ್ಲಿ ದೇಶ ಒಂದಾಗಿರಬೇಕು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸೈನಿಕರ ಸಾವನ್ನು ತಮ್ಮ ರಾಜಕೀಯಕ್ಕೆ ದುರ್ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ದೇಶದ ರಕ್ಷಣೆಯನ್ನು ರಾಜಕೀಯ ದುರ್ಬಳಕೆಗೆ ಬಳಸಿಕೊಳ್ಳುವುದು ಸರಿಯಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ ತಪ್ಪು ಹೆಜ್ಜೆ ಇಟ್ಟಿದ್ದಾರೆ. ಸೇನಾ ಕಾರ್ಯಾಚರಣೆಗೆ ರಾಜಕಾರಣ ಸುಳಿಯಕೂಡದು. ಸೈನಿಕರ ಶೌರ್ಯವನ್ನು ಸ್ವಾರ್ಥಕ್ಕೆ ಯಾರೂ ಬಳಸಿಕೊಳ್ಳಬಾರದು ಎಂದು ಸಲಹೆ ಮಾಡಿದರು.
ದೇಶದ ಭದ್ರತೆಗಿಂತ ಬಿಜೆಪಿಯವರಿಗೆ ಚುನಾವಣೆಯೆ ಮುಖ್ಯ. ಈ ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಲವು ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನದ ಒಳಗೆ ನುಗ್ಗಿ ಭಾರತ ದಾಳಿ ನಡೆಸಿದೆ. ಬಾಂಗ್ಲಾದೇಶ ಪ್ರತ್ಯೇಕವಾಗಲು ಯುದ್ಧ ಮಾಡಿದ್ದು ಯಾರು? ಕಾಂಗ್ರೆಸ್ ಪಕ್ಷ ಇದನ್ನ ರಾಜಕೀಯ ಮಾಡಲಿಲ್ಲ ಎಂದರು.
ಮಾ.4ಕ್ಕೆ ಸಮನ್ವಯ ಸಮಿತಿ ಸಭೆ: ಮಾ.4ರಂದು ಮೈತ್ರಿ ಸರಕಾರದ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಲೋಕಸಭೆ ಸೀಟು ಹಂಚಿಕೆ ಸಂಬಂಧ ಚರ್ಚೆ ನಡೆಯಲಿದೆ. ಮಾ.10ರ ಒಳಗೆ ಸೀಟು ಹಂಚಿಕೆ ಮಾತುಕತೆ ಮುಗಿಸಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು ಎಂದು ಈಶ್ವರ್ ಖಂಡ್ರೆ ತಿಳಿಸಿದರು.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮಧ್ಯೆ ಯಾರಿಗೆ ಎಷ್ಟು ಸ್ಥಾನ ಎನ್ನುವ ನಿರ್ಧಾರ ಇನ್ನೂ ಆಗಿಲ್ಲ. ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿದೆ. ಆಕಾಂಕ್ಷಿಗಳು ಎಲ್ಲೆಡೆ ಇದ್ದಾರೆ. ಎಲ್ಲರ ಜತೆ ಯಶಸ್ವಿಯಾಗಿ ಮಾತುಕತೆ ನಡೆಸಿ ಇರುವ ಸಣ್ಣಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದು ಈಶ್ವರ್ ಖಂಡ್ರೆ ತಿಳಿಸಿದರು.