ಬಿಎಸ್‌ವೈ ಹೇಳಿಕೆ ಖಂಡಿಸಿ ಭೂತ ದಹನ
ಬೆಂಗಳೂರು, ಫೆ. 28: ಭಾರತೀಯರ ಭಾವನಾತ್ಮಕತೆ ಮೇಲೆ ರಾಜಕೀಯ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೂಡಲೇ ರಾಜಕೀಯ ನಿವೃತ್ತಿ ಪಡೆಯಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಬಿಎಸ್‌ವೈ ಭೂತ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ‘ವಾಯುಸೇವೆ ದಾಳಿಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳನ್ನು ಗೆಲ್ಲಲಿದೆ’ ಎಂಬ ಬಿಎಸ್‌ವೈ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಯಡಿಯೂರಪ್ಪ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.
ಈ ವೇಳೆ ಮಾತನಾಡಿದ ಜಯಕರ್ನಾಟಕ ರಾಜ್ಯ ಕಾರ್ಯದರ್ಶಿ ಶೆ.ಬೋ. ರಾಧಾಕೃಷ್ಣ, ದೇಶಕ್ಕಾಗಿ ತ್ಯಾಗ-ಬಲಿದಾನಗೈದ ಯೋಧರ ಸಾವಿನಲ್ಲಿ ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರಾಜಕೀಯ ಕ್ಷೇತ್ರದಲ್ಲಿ ಇರಲು ಯೋಗ್ಯರಲ್ಲ ಎಂದು ಆಕ್ಷೇಪಿಸಿದರು.
ಯೋಧರ ಶವಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಲಾಭಕ್ಕಾಗಿ ಬಳಕೆ ಮಾಡುತ್ತಿರುವ ಯಡಿಯೂರಪ್ಪ ಕೂಡಲೇ ದೇಶದ ಜನತೆ ಕ್ಷಮೆ ಕೋರಬೇಕು. ರಾಜ್ಯ ಸರಕಾರ ಕೂಡಲೇ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಎನ್.ಜಗದೀಶ್, ಹಿರಿಯ ಮುಖಂಡ ಸುರೇಶ್ ರೈ, ಮಹಿಳಾ ಘಟಕದ ಅಧ್ಯಕ್ಷ ಗಂಗರಾಜಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.