×
Ad

ಕನಕಪುರ ತಹಶೀಲ್ದಾರ್‌ಗೆ ಕಾರಾಗೃಹಕ್ಕೆ ಕಳುಹಿಸುತ್ತೇನೆಂದು ಎಚ್ಚರಿಕೆ ನೀಡಿದ ಹೈಕೋರ್ಟ್

Update: 2019-02-28 21:32 IST

ಬೆಂಗಳೂರು, ಫೆ.28: ಭೂ ಪರಿವರ್ತನೆ ಮತ್ತು ಪಹಣಿ ಪತ್ರದಲ್ಲಿ ಕನಕಪುರ ತಾಲೂಕಿನ ಹಾರೋಹಳ್ಳಿ ಹೋಬಳಿಯಲ್ಲಿರುವ ಒಂದು ಎಕರೆ ಜಮೀನಿನ ಸರ್ವೇ ನಂ-58 ಅನ್ನು ನಮೂದಿಸಲು ವಿಳಂಬ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕನಕಪುರ ತಾಲೂಕಿನ ತಹಶೀಲ್ದಾರ್ ಎಂ. ಆನಂದಯ್ಯ ಅವರಿಗೆ ಹೈಕೋರ್ಟ್, ನಿಮ್ಮನ್ನು ಕೊಳ್ಳೆಗಾಲಕ್ಕೆ ವರ್ಗವಾಗಲು ಬಿಡುವುದಿಲ್ಲ. ಬದಲಾಗಿ, ನಿಮ್ಮನ್ನು ಸೀದಾ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದೆ.

ಭೂ ಪರಿವರ್ತನೆ ಮತ್ತು ಪಹಣಿ ಪತ್ರದಲ್ಲಿ ಜಮೀನಿನ ಸರ್ವೇ ನಂಬರ್ ಅನ್ನು ನಮೂದಿಸುತ್ತಿಲ್ಲ ಎಂದು ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು. ಬುಧವಾರವಷ್ಟೇ ಜಮೀನಿನ ವಿಚಾರದಲ್ಲಿ ನೀವು ಯಾಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ನಿಮ್ಮನ್ನು ಪ್ರಶ್ನಿಸಲಾಗಿತ್ತು. ಅಷ್ಟರಲ್ಲಾಗಲೇ ನೀವು ಯಾರದೋ ವಸೂಲಿ ಬಳಸಿ ಕೊಳ್ಳೆಗಾಲಕ್ಕೆ ವರ್ಗಾವಣೆಗೊಂಡಿದ್ದೀರಿ. ಆದರೆ, ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಕೊಳ್ಳೆಗಾಲದ ಬದಲಾಗಿ ಪರಪ್ಪನ ಅಗ್ರಹಾರದ ಕಾರಾಗೃಹಕ್ಕೆ ಕಳುಹಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ತಹಶೀಲ್ದಾರ್ ಆನಂದಯ್ಯಗೆ ನ್ಯಾಯಪೀಠವು ಎಚ್ಚರಿಕೆ ನೀಡಿತು.

ಈಗಾಗಲೇ ನಾನು ಕೊಳ್ಳೆಗಾಲಕ್ಕೆ ವರ್ಗಾವಣೆ ಆಗಿದ್ದೇನೆ ಎಂದು ಹೇಳುತ್ತಿದ್ದೀರಿ. ಆದರೆ, ಕನಕಪುರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸದ ನೀವು ಕೊಳ್ಳೆಗಾಲದಲ್ಲಿ ಮತ್ತೊಂದಿಷ್ಟು ಜನರನ್ನು ಹಾಳು ಮಾಡುವುದಿಲ್ಲ ಎನ್ನುವುದು ಏನು ಗ್ಯಾರಂಟಿ ಎಂದು ಪ್ರಶ್ನಿಸಿದ ನ್ಯಾಯಪೀಠವು ತಹಶೀಲ್ದಾರ್ ಆನಂದಯ್ಯಗೆ ಮಾ.6ರಂದು ಮತ್ತೆ ಕೋರ್ಟ್‌ಗೆ ಹಾಜರಾಗಲು ಸೂಚಿಸಿತು. ಒಂದು ವೇಳೆ ಹಾಜರಾಗದಿದ್ದರೆ ನಿಮ್ಮನ್ನು ಜೀಪ್‌ನಲ್ಲಿ ಕರೆತರಿಸುವುದು ತಮಗೆ ಗೊತ್ತಿದೆ ಎಂದು ನ್ಯಾಯಪೀಠವು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News