ಸಚಿವ ಡಿಕೆಶಿ ವಿರುದ್ಧದ ಐಟಿ ದಾಳಿ ಪ್ರಕರಣ: ಮೂರು ಪ್ರಕರಣಗಳಲ್ಲಿ ಆರೋಪ ಮುಕ್ತಗೊಳಿಸಿದ ನ್ಯಾಯಾಲಯ
ಬೆಂಗಳೂರು, ಫೆ.28: ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಐಟಿ ಇಲಾಖೆ ದಾಖಲಿಸಿದ್ದ ನಾಲ್ಕು ಪ್ರಕರಣಗಳ ಪೈಕಿ ಮೂರರಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿ ಆದೇಶಿಸಿದೆ.
ಸಾಕ್ಷನಾಶ, ಅಸಂಬದ್ಧ ಹೇಳಿಕೆ, ಚೀಟಿ ಹರಿದ ಪ್ರಕರಣದ ಸಂಬಂಧ ಪ್ರಕರಣಗಳಲ್ಲಿ ಡಿಕೆಶಿ ಆರೋಪ ಮುಕ್ತರಾಗಿದ್ದಾರೆ ಎಂದು ನ್ಯಾಯಾಲಯ ಘೋಷಿಸಿದೆ. 2017ರ ಆ.1ಕ್ಕೆ ಡಿಕೆಶಿ ಅವರ ಬೆಂಗಳೂರು, ಹೊಸದಿಲ್ಲಿ ನಿವಾಸ ಸೇರಿ ಐವತ್ತು ಕಡೆ ಐಟಿ ದಾಳಿಯಾಗಿದ್ದು ಆ ವೇಳೆ 300 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಆದಾಯ ತೆರಿಗೆ ಇಲಾಖೆ ದೂರು ಸಲ್ಲಿಸಿದೆ. ಐಟಿ ಇಲಾಖೆ ದೂರಿನ ವಿರುದ್ಧ ಸಚಿವ ಡಿಕೆಶಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ನನ್ನ ಮೇಲೆ ಆರೋಪ ಮಾಡಿದ ಅಧಿಕಾರಿಗೆ ಆ ರೀತಿ ಪ್ರಕರಣ ದಾಖಲಿಸಲು ಯಾವ ಅಧಿಕಾರವಿಲ್ಲ. ಅಲ್ಲದೆ, ಈ ಆರೋಪಗಳೆಲ್ಲಾ ನಿರಾಧಾರ ಎಂದು ಡಿಕೆಶಿ ವಾದಿಸಿದ್ದರು.
ಈ ಸಂಬಂಧ ಫೆಬ್ರವರಿ 6ರಂದು ಜನಪ್ರತಿನಿಧಿ ನ್ಯಾಯಾಲಯ ವಿಚಾರಣೆ ನಡೆಸಿ, ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಗುರುವಾರ ತನ್ನ ಆದೇಶ ನೀಡಿರುವ ನ್ಯಾಯಾಲಯ ಸಚಿವರನ್ನು ಮೂರು ಪ್ರಕರಣಗಳಿಂದ ಆರೋಪ ಮುಕ್ತವಾಗಿಸಿದೆ. ಈ ನಡುವೆ ಡಿ.ಕೆ.ಶಿವಕುಮಾರ್ ವಿರುದ್ಧದ ಹವಾಲಾ ಪ್ರಕರಣ ಹಾಗೆಯೇ ಉಳಿದಿದ್ದು, ಈ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕಿದೆ.