ಎಚ್1ಎನ್1 ನಿಯಂತ್ರಣಕ್ಕೆ ಕ್ರಮ: ಡಾ.ಕೆ.ಎಸ್.ಪ್ರಕಾಶ್

Update: 2019-02-28 16:53 GMT

ಬೆಂಗಳೂರು, ಫೆ.28: ನಗರ ಜಿಲ್ಲೆಯಾದ್ಯಂತ ಎಚ್1ಎನ್1 ಜ್ವರ ವ್ಯಾಪಿಸದಂತೆ ಸಂಪೂರ್ಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಕೆ.ಎಸ್.ಪ್ರಕಾಶ್ ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಎಚ್1ಎನ್1 ಸೋಂಕು ತಡೆ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಎಚ್1ಎನ್1 ಬಗ್ಗೆ ಅರಿವು ಮೂಡಿಸಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರಿಗೆ ರೋಗದ ಬಗ್ಗೆ ಸೂಕ್ತ ಮಾಹಿತಿ ನೀಡಲಾಗುತ್ತಿದ್ದು, ತಾಲೂಕು ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಂಕ್ರಾಮಿಕ ರೋಗಗಳ ಅರಿವು ಕುರಿತು ಜಾಥಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಆರೋಗ್ಯ ಸಹಾಯಕರಿಂದ ಪ್ರತಿದಿನ 60 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ ಡೆಂಗ್ ನಿಯಂತ್ರಣ ಮಾಡಲಾಗಿದೆ. ಎಚ್1ಎನ್1 ಪ್ರಕರಣ ವಲಸಿಗರಲ್ಲಿ ಹೆಚ್ಚು ಕಾಣುತ್ತಿದೆ. ಜಿಲ್ಲೆಯ 12 ಸರಕಾರಿ ವೈದ್ಯಕೀಯ ಕಾಲೇಜು, ಖಾಸಗಿ ಕಾಲೇಜುಗಳು ಸೇರಿದಂತೆ ಒಟ್ಟು 1658 ವೈದ್ಯರಿಗೆ ಈ ಕಾಯಿಲೆಗಳ ಬಗ್ಗೆ ಸಭೆಗಳ ಮೂಲಕ ಅರಿವು ಮೂಡಿಸಲಾಗಿದೆ. ಸಾರ್ವಜನಿಕರು ಮುಖ್ಯವಾಗಿ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು.

ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣದಲ್ಲಿದೆ. ಬಡವರಿಗೆ, ಬಿಪಿಎಲ್ ಕಾರ್ಡುದಾರರಿಗೆ ಆರೋಗ್ಯ ಸೇವೆಗಳು ಸಿಗಲೆಂದು ಹಾಗೂ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲು ಮಾರ್ಚ್ 3, 5 ಹಾಗೂ 7 ರಂದು ಬಸವನಗುಡಿ, ಸರ್ ಸಿ.ವಿ.ರಾಮನ್ ನಗರ ಹಾಗೂ ದಾಸರಹಳ್ಳಿಯಲ್ಲಿ ಬೃಹತ್ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್ 10 ರಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆಯನ್ನು ಹಾಕಲಾಗುದವುದು. ಈ ನಿಟ್ಟಿನಲ್ಲಿ ನಗರ ಜಿಲ್ಲೆ ಸಹ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ.ಕೆ. ಸುನಂದಾ ಮಾತನಾಡಿ, ಕಳೆದ ವರ್ಷ 64 ಖಚಿತ ಎಚ್1ಎನ್1 ಪ್ರಕರಣಗಳು ವರದಿಯಾಗಿದ್ದವು, ಆದರೆ ಈ ವರ್ಷ ಇಲ್ಲಿಯವರೆಗೆ 39 ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳಿಂದ ಜಿಲ್ಲಾದ್ಯಂತ ಸಮೀಕ್ಷೆ ನಡೆಸಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಎಚ್1ಎನ್1 ಜ್ವರ ಗಾಳಿಯಿಂದ ಹರಡುವ ಜ್ವರವಾಗಿದ್ದು, 2 ರಿಂದ 8 ಗಂಟೆಯ ಕಾಲ ಈ ವೈರಾಣು ಜೀವಂತವಾಗಿರುತ್ತದೆ. ಮೊದಲ ಹಂತದಲ್ಲಿ ರೋಗಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಳ್ಳಲಿದ್ದು, ಎರಡನೇ ಹಂತದಲ್ಲಿ ಅತಿ ಜ್ವರ ಹಾಗೂ ಗಂಟಲುಕೆರೆತ ಉಂಟಾಗುತ್ತದೆ. ಕೊನೆಯ ಹಂತವಾಗಿ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳಲಿದೆ. ಹೀಗಾಗಿ, ಸಾರ್ವಜನಿಕರು ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ನೀಡಬೇಕು. ಅಲ್ಲದೆ, ಪೌಷ್ಠಿಕ ಆಹಾರ ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳಾದ ಡಾ. ಮಹೇಶ್ ಉಪಸಿತ್ಥರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News