ವಕೀಲೆ ಧರಣಿ ಆತ್ಮಹತ್ಯೆಗೆ ಕಾರಣಕರ್ತರ ವಿರುದ್ಧ ಕ್ರಮಕ್ಕೆ ಆಗ್ರಹ: ಮಾ.6 ರಂದು ಪ್ರತಿಭಟನೆ

Update: 2019-02-28 16:56 GMT

ಬೆಂಗಳೂರು, ಫೆ.28: ವಕೀಲೆ ಕುಮಾರಿ ಧರಣಿ ಅವರ ಆತ್ಮಹತ್ಯೆಗೆ ಕಾರಣಕರ್ತರಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾ.6 ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ವಕೀಲರು ಹಾಗೂ ಇತರೆ ಸಂಘಟನೆಗಳು ನಿರ್ಣಯಿಸಿವೆ

ಗುರುವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಧರಣಿ ಆತ್ಯಹತ್ಯೆ ಕುರಿತ ಪ್ರತಿರೋಧ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಮಾ.6 ರಂದು ನಗರದ ಪುರಭವನದಿಂದ ಮೈಸೂರು ಬ್ಯಾಂಕ್ ವೃತ್ತದವರೆಗೂ ಬೃಹತ್ ಪ್ರತಿಭಟನಾ ರ‍್ಯಾಲಿ ಆಯೋಜಿಸಲಾಗಿದೆ.

ಧರಣಿ ಆತ್ಯಹತ್ಯೆಗೆ ಕಾರಣಕರ್ತರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಬೇಕು. ಜತೆಗೆ, ಧರಣಿ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸರಕಾರಕ್ಕೆ ಮನವಿ ಸಲ್ಲಿಸಲು ಸಭೆ ತೀರ್ಮಾನಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಕೀಲ ಭಕ್ತವತ್ಸಲಂ, ರಾಜಕೀಯ ನಾಯಕರ ಪಿತೂರಿಯಿಂದ ಮನನೊಂದು ವಕೀಲೆಯಾಗಿದ್ದಂತಹ ದಿಟ್ಟ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವುದು ಇಂದಿನ ದುರಂತವಾಗಿದೆ. ತುಂಡು ಭೂಮಿಗಾಗಿ ನೂರಾರು ವರ್ಷ ಬದುಕಬೇಕಿದ್ದ ಜೀವವನ್ನೇ ತಮ್ಮ ಕಿರುಕುಳದಿಂದ ಸಾಯುವಂತೆ ಮಾಡಿದರು ಎಂದು ವಿಷಾದಿಸಿದರು.

ನಗರದ ಟಿನ್ ಫ್ಯಾಕ್ಟರಿ ಬಳಿ ವಾಸವಿದ್ದ ವಕೀಲೆ ಕುಮಾರಿ ಧರಣಿಯ ತಮ್ಮ ಸಣ್ಣ ಮನೆಯ ಸ್ಥಳ ಕಬಳಿಸಲು ಶಾಸಕ ಬೈರತಿ ಬಸವರಾಜರ ಶಿಷ್ಯನಾದ ವಿ.ಸುರೇಶ್ ಎಂಬ ಅಲ್ಲಿನ ಸ್ಥಳೀಯ ಪಾಲಿಕೆ ಸದಸ್ಯ ನಿರಂತರವಾದ ಕಿರುಕುಳ ನೀಡಿದ್ದಾನೆ. ಮಹಿಳಾ ಗೂಂಡಾಗಳನ್ನು, ರೌಡಿಗಳನ್ನು ಅವರ ಮನೆಗೆ ಕಳುಹಿಸಿ ದೊಡ್ಡ ದಾಂಧಲೆಯನ್ನೂ ನಡೆಸಿದ್ದಾನೆ ಎಂದರು.

ಈ ಸಂಬಂಧ ಧರಣಿಯು ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪೊಲೀಸರು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದೇ, ಇವರ ವಿರುದ್ಧವೇ ಪ್ರತಿದೂರನ್ನು ದಾಖಲಿಸುವಂತೆ ಆರೋಪಿಗಳಿಗೆ ಪ್ರೋತ್ಸಾಹಿಸಿದ್ದಾರೆ. ಅವರ ರಾಜಕೀಯ ಹಾಗೂ ಹಣದ ಎದುರು ಇವರ ದೂರಿಗೆ ಬೆಲೆ ಇಲ್ಲದಂತಾಗಿದೆ ಎಂದು ಹೇಳಿದರು.

ಇದರ ನಂತರ ಧರಣಿ ಕುಮಾರಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಆಯೋಗ, ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ಒಳಗೊಂಡಂತೆ 21 ಕಡೆ ದೂರು ಸಲ್ಲಿಸಿದ್ದಾರೆ. ಆದರೆ, ಎಲ್ಲಿಂದಲೂ ನ್ಯಾಯ ಸಿಗುವ ಯಾವುದೇ ಭರವಸೆ ಸಿಕ್ಕಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಈ ಸಂಬಂಧ ಮಾತನಾಡಿದರೆ ಸರಕಾರ ಘನತೆ ಕಡಿಮೆಯಾಗುತ್ತದೆ ಎಂದು ಇದನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ವಕೀಲರಾದ ಮುನಿಯಪ್ಪ, ಪ್ರಾಧ್ಯಾಪಕ ಹುಲಿಕುಂಟೆ ಮೂರ್ತಿ, ಸಂಘಟನೆಯ ಮುಖಂಡರಾದ ಮಲ್ಲಿಗೆ ಸಿರಿಮನೆ, ಪದ್ಮಾ, ತ್ರಿಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News