ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಗಳಲ್ಲಿ ಅನಾಹುತ ತಪ್ಪಿಸಲು ‘ತುರ್ತು ಸ್ಪಂದನಾ ದಳ’

Update: 2019-02-28 17:05 GMT

ಬೆಂಗಳೂರು, ಫೆ.28: ದೇಶದ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಸಂಭವನೀಯ ಅನಾಹುತಗಳನ್ನು ತಪ್ಪಿಸಲು ‘ತುರ್ತು ಸ್ಪಂದನಾ ದಳ’ ರಚನೆ ಹಾಗೂ ಇನ್ನಿತರೆ ಮುಂಜಾಗೃತ ಭದ್ರತಾ ಕ್ರಮವನ್ನು ವಹಿಸುತ್ತಿರುವುದಾಗಿ ಕೆಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಸಿ. ಶಿವಯೋಗಿ ಕಳಸದ ತಿಳಿಸಿದ್ದಾರೆ.

ವಿಭಾಗಗಳ ಮಟ್ಟದಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ನಿಗಾವಹಿಸಲು ತುರ್ತು ಸ್ಪಂದನಾ ದಳ ರಚಿಸಿದ್ದು, ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗದ ಭದ್ರತಾ ಸಿಬ್ಬಂದಿಗಳನ್ನೊಳಗೊಂಡ ಸಿಬ್ಬಂದಿಗಳ ತಂಡದೊಂದಿಗೆೆ, ಬಸ್ ನಿಲ್ದಾಣಗಳಲ್ಲಿ ಹೆಚ್ಚು ಗಸ್ತು ನಿಯೋಜನೆ ಹಾಗೂ ಅನಿರೀಕ್ಷಿತ ತಪಾಸಣೆ ಕಾರ್ಯ ಕೈಗೊಳ್ಳುವುದು. ಅಲ್ಲದೆ, ವಿಭಾಗೀಯ ನಿಯಂತ್ರಣಾಧಿಕಾರಿಗಳು ಆಯಾಯ ಜಿಲ್ಲಾ ವ್ಯಾಪ್ತಿಯ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ನಿರಂತರವಾಗಿ ಸಂಪರ್ಕದಲ್ಲಿದ್ದು, ಹೆಚ್ಚಿನ ನಿಗಾವಹಿಸಲು ಕ್ರಮ ತೆಗೆದುಕೊಳ್ಳುವುದು.

ಬಸ್ ನಿಲ್ದಾಣದಲ್ಲಿ ಕಂಡು ಬರುವ ಅನುಮಾನಾಸ್ಪದ ವಸ್ತುಗಳು ಮತ್ತು ವಾರಸುದಾರರಿಲ್ಲದ ಲಗ್ಗೇಜುಗಳ ಬಗ್ಗೆ ಹೆಚ್ಚಿನ ಒತ್ತು ನೀಡಿ ಗಮನಹರಿಸುವುದು. ಒಂದು ವೇಳೆ ಇಂತಹ ವಸ್ತುಗಳು ಕಂಡು ಬಂದಲ್ಲಿ ಕೂಡಲೆ ನಿಗಮದ ಮೇಲಾಧಿಕಾರಿಗಳ ಹಾಗೂ ಸ್ಥಳೀಯ ಪೊಲೀಸರುಗಳ ಗಮನಕ್ಕೆ ತರುವುದು ಹಾಗೂ ಕೇಂದ್ರ ಕಚೇರಿಯ ಮಟ್ಟದಲ್ಲಿ ಒಂದು ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ವಿಭಾಗಗಳಲ್ಲಿ ರಚಿಸಿರುವ ತುರ್ತು ಸ್ಪಂದನಾ ದಳದ ಕಾರ್ಯವನ್ನು ಮೇಲ್ವಿಚಾರಣೆ ನಡೆಸಲು ಹಾಗೂ ಅನಿರೀಕ್ಷಿತ ತಪಾಸಣೆಗೆ ಒಳಪಡಿಸಲು ಕ್ರಮವಹಿಸಲಾಗಿದೆ.

ಅಲ್ಲದೆ, ನಿಗಮದ ಬಸ್ ನಿಲ್ದಾಣಗಳಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವ್ಯಕ್ತಿ/ವಾರಸುದಾರರಿಲ್ಲದ ವಸ್ತುಗಳು ಹಾಗೂ ಇನ್ನಾವುದೇ ಅಹಿತಕರ ಘಟನೆಗಳು ಗಮನಕ್ಕೆ ಬಂದಲ್ಲಿ ಕೂಡಲೇ, ಸಾರ್ವಜನಿಕ ಪ್ರಯಾಣಿಕರು ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿ ಅಥವಾ ಹತ್ತಿರದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಶಿವಯೋಗಿ ಕಳಸದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News