ರಫೇಲ್ ವ್ಯವಹಾರ: ಮೋದಿ ಸರಕಾರ v/s ಭಾರತ ರಾಷ್ಟ್ರದ ಪ್ರಶ್ನೆ

Update: 2019-03-02 08:38 GMT

ರಫೇಲ್ ವ್ಯವಹಾರವು ಭಾರತ ಮತ್ತು ಫ್ರಾನ್ಸ್‌ನ ನಾಯಕರ ಹಾಗೂ ಸರಕಾರಗಳ ಸುತ್ತ ಗಿರಕಿ ಹೊಡೆಯುತ್ತಿದೆಯಾದರೂ ಅದು ನಿಜವಾಗಿ ಏನು ಎಂಬುದು ನಮ್ಮ ಕಣ್ಣೆದುರಿಗೇ ಕಾಣಿಸುತ್ತದೆ. ಈ ಪ್ರಕರಣವು ಸುತ್ತ ಇರುವ ಕತ್ತಲೆಯನ್ನು ಕಡಿಮೆ ಮಾಡುವ ಬದಲು ಅದರ ಸುತ್ತ ದಟ್ಟವಾದ ಕತ್ತಲು ಆವರಿಸಿಕೊಂಡಿರುವುದು ಕಂಡು ಬರುತ್ತದೆ. ಯಾಕೆ ಹೀಗಾಗಿದೆ ಎಂದರೆ ಸರಕಾರವು ಭಾರತದ ಮಹಾಲೇಖಪಾಲರ ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕ ಸಮಿತಿಗೆ (ಪಿಎಸಿ) ಸಲ್ಲಿಸಲಾಗಿದೆ ಎಂದು ಮೊದಲು ಹೇಳಿ ಸುಪ್ರೀಂ ಕೋರ್ಟ್‌ನ ಹಾದಿ ತಪ್ಪಿಸಿತು. ಈಗ ಸಿಎಜಿ ವರದಿ ಬಹಿರಂಗಗೊಂಡ ಬಳಿಕ ಅದು ಭಾರತದ ಜನತೆ ಹಾಗೂ ಪ್ರಜಾಪ್ರಭುತ್ವದ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿದೆ. ಈ ವರದಿಯು ನಿಜ ವಿಷಯದ ಬಗ್ಗೆ ಕಡಿಮೆ ಹೇಳಿ ಹೆಚ್ಚನ್ನು ಮುಚ್ಚಿಡುತ್ತದೆ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ವಾಸ್ತವ ಸಂಗತಿಗಳ ಬಗ್ಗೆ ಮೌನ ತಾಳುತ್ತದೆ.

ಸರಕಾರದ ಒಂದು ಅಂಗವನ್ನು ಮತ್ತು ಒಬ್ಬ ಬಂಡವಾಳಶಾಹಿಯನ್ನು ರಕ್ಷಿಸಲಿಕ್ಕಾಗಿ ಸಿಎಜಿ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಸಮಾಜವಾದಿ ಪಕ್ಷಕ್ಕೆ ಅನ್ನಿಸುತ್ತಿದೆ. ರಾಷ್ಟ್ರದ ಭದ್ರತೆಯನ್ನು ಉಲ್ಲೇಖಿಸಿ ವರದಿಯು ಮೊದಲ (ಒರಿಜಿನಲ್) ವಿಮಾನದ ಬೆಲೆ; ಅದರಲ್ಲಿ ಎಷ್ಟು ರೀತಿಯ ಸಲಕರಣೆಗಳನ್ನು ಅಳವಡಿಸಲಾಗಿದೆ ಮತ್ತು ಅವುಗಳನ್ನು ಅಳವಡಿಸಿದ ಬಳಿಕವೂ ಒಟ್ಟು ಬೆಲೆ ಎಷ್ಟಾಗುತ್ತದೆ ಇತ್ಯಾದಿ ವಿಷಯಗಳನ್ನು ಮುಚ್ಚಿಟ್ಟಿದೆ. ಈಗ ಏಳುವ ಪ್ರಶ್ನೆ: ಅದು ಯಾಕಾಗಿ ಹೀಗೆ ಮಾಡಿದೆ? ತನ್ನ ವರದಿಯಲ್ಲಿ ಸಿಎಜಿಯು ಭಾರತೀಯ ವಾಯುಸೇನೆಯ ಹನ್ನೊಂದು ವ್ಯವಹಾರಗಳಲ್ಲಿ ಹತ್ತು ವ್ಯವಹಾರಗಳ ಬೆಲೆಯನ್ನು ಹೇಳುವಾಗ, ಅದು ಯಾಕಾಗಿ ಕೇವಲ ರಫೇಲ್ ವಿಮಾನದ ಬೆಲೆೆಯನ್ನು ಮುಚ್ಚಿಡುತ್ತದೆ? ಯಾಕಾಗಿ ಇದನ್ನು ಹೇಳುವುದಿಲ್ಲ? ಇಷ್ಟಾಗಿಯೂ ಈಗಿನ ಎನ್‌ಡಿಎ ಸರಕಾರ ಮಾಡಿಕೊಂಡಿರುವ ಒಪ್ಪಂದವು ಹಿಂದಿನ ಯುಪಿಎ ಸರಕಾರವು ಮಾಡಿಕೊಂಡಿದ್ದ ಒಪ್ಪಂದಕ್ಕಿಂತ ಶೇ.2.86 ಅಗ್ಗ ಎನ್ನುತ್ತದೆ ವರದಿ. ಸಿಎಜಿಯ ಈ ತೀರ್ಮಾನ ಕನಿಷ್ಠ ಭಾವನಾತ್ಮಕವಾಗಿಯಾದರೂ ಮೋದಿ ಸರಕಾರದ ಪರವಾಗಿ ಮಾಡಲಿರುವ ತೀರ್ಮಾನ ಎಂದು ತಿಳಿಯಲಾಗಿದೆ. ಆದರೆ ಈ ತೀರ್ಮಾನವು ಪ್ರಭಾವಿ ಸಚಿವ ಅರುಣ್ ಜೇಟ್ಲಿ ಅವರ ಹೇಳಿಕೆ ತಪ್ಪು ಎಂಬುದನ್ನು ರುಜುವಾತು ಪಡಿಸುತ್ತದೆ. ಜನವರಿ 2ರಂದು ಜೇಟ್ಲಿಯವರು, ‘‘ನಾವು ಈ ವ್ಯವಹಾರವನ್ನು ಯುಪಿಎ ಸರಕಾರ ಮಾಡಿದ್ದ ವ್ಯವಹಾರಕ್ಕಿಂತ ಶೇ. 9ರಷ್ಟು ಕಡಿಮೆ ಬೆಲೆಗೆ ಮಾಡಿದ್ದೇವೆ’’ ಎಂದು ಹೇಳಿಕೆ ನೀಡಿದ್ದರು. ಸಿಎಜಿ ದತ್ತಾಂಶಗಳ ಪ್ರಕಾರ ವಾಯುಸೇನೆಯ ಒಟ್ಟು ಹನ್ನೊಂದು ವ್ಯವಹಾರಗಳ ಮೌಲ್ಯ 95,000 ಕೋಟಿ ರೂಪಾಯಿಗಳು. ಇದರಲ್ಲಿ ಹತ್ತು ವ್ಯವಹಾರ (ಡೀಲ್)ಗಳ ಒಟ್ಟು ಮೌಲ್ಯ 34,423 ಕೋಟಿ ರೂ.ಗಳು. ವರದಿಯು ಇಷ್ಟು ಹೇಳಿ ಮೌನವಾಗಿದೆ. ರಫೇಲ್ ವಿಮಾನ ವ್ಯವಹಾರದ ಒಟ್ಟು ಮೊತ್ತ 60,577 ಕೋಟಿ ರೂಪಾಯಿ ಎಂದು ಸಹಜವಾಗಿಯೇ ಯಾರು ಬೇಕಾದರೂ ತೀರ್ಮಾನಿಸಿಬಿಡಬಹುದು.

ಇಷ್ಟೇ ಅಲ್ಲದೆ ಬ್ಯಾಂಕ್ ಗ್ಯಾರಂಟಿ ಅಥವಾ ಸೊವರಿನ್ ಗ್ಯಾರಂಟಿಯ ಬಗ್ಗೆ ಸರಕಾರ ಹೇಳಿರುವುದಕ್ಕೂ ಮತ್ತು ಸಿಎಜಿ ಹೇಳಿರುವುದಕ್ಕೂ ಒಂದಕ್ಕೊಂದು ತಾಳೆಯಾಗುವುದಿಲ್ಲ. ವ್ಯವಹಾರದಲ್ಲಿ ಬ್ಯಾಂಕ್ ಗ್ಯಾರಂಟಿ ಇಲ್ಲದಿರುವುದು ಸರಕಾರಕ್ಕೆ ಲಾಭದಾಯಕವೆಂದು ಸರಕಾರ ಹೇಳಿದರೆ ಅದು ಫ್ರಾನ್ಸ್‌ನ ವಿಮಾನ ತಯಾರಕ ಕಂಪೆನಿ ಡಸಾಲ್ಟ್‌ಗೆ ಆಗಿರುವ ಉಳಿತಾಯ, ಲಾಭ ಎಂದು ಸಿಎಜಿ ಹೇಳುತ್ತದೆ. ಸಿಎಜಿ ವರದಿಯಲ್ಲಿ ಯುದ್ಧ ವಿಮಾನಗಳ ಬೆಲೆಗಳನ್ನು ಹನ್ನೊಂದು ಕಡೆಗಳಲ್ಲಿ ಹೋಲಿಸಿ ನೋಡಲಾಗಿದೆ ಆದರೆ ಎಲ್ಲಿಯೂ ಕೂಡ ಬೆಲೆಗಳು ಎಷ್ಟು ಎಂಬುದನ್ನು ನಮೂದಿಸಲಾಗಿಲ್ಲ. ಎಲ್ಲಾ ಕಡೆಗಳನ್ನು ಕೇವಲ ಪ್ರತಿಶತಗಳನ್ನಷ್ಟೇ ಹೇಳಲಾಗಿದೆ.

 ಅಲ್ಲದೆ, ಮೊದಲು 126 ವಿಮಾನಗಳಿಗೆ ಮಾಡಿಕೊಳ್ಳಲಾಗಿದ್ದ ವ್ಯವಹಾರ ದಿಢೀರನೆ ಯಾಕಾಗಿ 36 ವಿಮಾನಗಳಿಗೆ ಇಳಿಯಿತು ಎಂಬ ಕುರಿತು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ. ಅಂದರೆ 126 ವಿಮಾನಗಳ ಬದಲಾಗಿ ಕೇವಲ ಮೂವತ್ತು ವಿಮಾನಗಳಿಂದ ಭಾರತೀಯ ವಾಯು ಸೇನೆಯ ಶಕ್ತಿಯನ್ನು ಹೇಗೆ ಹೆಚ್ಚಿಸಲಾಗುತ್ತದೆ? ಹಾಗೆಯೇ ಎಚ್‌ಎಎಲ್‌ಗೆ ನೀಡಲಾಗಿದ್ದ ಗುತ್ತಿಗೆಯನ್ನು ದಿಢೀರನೆ ಯಾಕೆ ಅನಿಲ್ ಅಂಬಾನಿಯ ಕಂಪೆನಿಗೆ ನೀಡಲಾಯಿತು ಎಂದು ವರದಿ ಹೇಳುವುದಿಲ್ಲ. ಪ್ರಧಾನಿ ಮತ್ತು ಅವರ ಕಚೇರಿ ಈ ವ್ಯವಹಾರದ ಪ್ರಕ್ರಿಯೆಯಲ್ಲಿ ಅನುಚಿತವಾಗಿ ಹೇಗೆ ಪ್ರಭಾವ ಬೀರಿತು ಎಂಬ ಬಗ್ಗೆ ವರದಿ ಏನನ್ನಾದರೂ ಹೇಳುತ್ತದೆಂದು ನಾವು ಈ ವರದಿಯಿಂದ ನಿರೀಕ್ಷಿಸುವಂತಿಲ್ಲ. ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ಕಂಪೆನಿಗೆ ಗುತ್ತಿಗೆ ನೀಡಿ ಬೆಂಗಳೂರಿನ ಸರಕಾರಿ ಸ್ವಾಮ್ಯದ ಎಚ್‌ಎಎಲ್‌ಕಂಪೆನಿಯನ್ನು ರಫೇಲ್ ವ್ಯವಹಾರದಿಂದ ಹೇಗೆ ಹೊರ ತಳ್ಳಲಾಯಿತು? ಒಪ್ಪಂದದಲ್ಲಿ ಹೇಗೆ ಭ್ರಷ್ಟಾಚಾರ ವಿರೋಧಿ ನಿಬಂಧನೆಗಳನ್ನು ಕೈಬಿಡಲಾಯಿತು? ಎಂಬ ಅತ್ಯಂತ ಮುಖ್ಯವಾದ ಪ್ರಶ್ನೆಗಳಿಗೆ ಸಿಎಜಿ ವರದಿಯಿಂದ ಉತ್ತರ ಸಿಗಬಹುದೆಂದು ಖಂಡಿತವಾಗಿಯೂ ನಿರೀಕ್ಷಿಸುವಂತಿಲ್ಲ.

ಭಾರತದ ಅರ್ಥವ್ಯವಸ್ಥೆ ಮತ್ತು ರಾಜಕಾರಣವು ಕೋಟಾ ರಾಷ್ಟ್ರೀಯತೆಯ ಹಿಡಿತದಲ್ಲಿ ಸಿಕ್ಕಿ ಹಾಕಿಕೊಂಡಿದೆ ಎಂಬುದನ್ನು ರಫೇಲ್ ಯುದ್ಧವಿಮಾನ ಹಗರಣ ತೋರಿಸುತ್ತದೆ ಎಂದು ಸೋಷಲಿಸ್ಟ್ ಪಾರ್ಟಿ ತಿಳಿಯುತ್ತದೆ. ಈ ಕೋಟಾ ರಾಷ್ಟ್ರೀಯತೆಯು ವಿದೇಶಿ ಹಾಗೂ ಸ್ವದೇಶಿ ಶಸ್ತ್ರಾಸ್ತ್ರ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತದೆ. ಈ ಕಂಪೆನಿಗಳು ಹೇಳುವಂತೆಯೇ ಅವುಗಳ ಇಚ್ಛಾನುಸಾರ ಶಸ್ತ್ರಾಸ್ತ್ರ ವ್ಯವಹಾರಗಳನ್ನು ಕುದುರಿಸಲಾಗುತ್ತದೆ. ಅವುಗಳ ಷರತ್ತುಗಳಿಗನುಗುಣವಾಗಿ ಸರಕಾರ ಕಾರ್ಯಾಚರಿಸುತ್ತದೆ ಮತ್ತು ಸರಕಾರದ ಸಂಸ್ಥೆಗಳು ಇದಕ್ಕೆಲ್ಲ ಅನುಕೂಲವಾಗಿರುವಂತಹ ವರದಿಗಳನ್ನೇ ನೀಡುತ್ತವೆ. ಈ ಕಂಪೆನಿಗಳು ಕೊಂಡುಕೊಂಡಿರುವ ಟಿವಿ ಚಾನೆಲ್‌ಗಳು ಹಾಗೂ ವರ್ತಮಾನ ಪತ್ರಿಕೆಗಳು ಕಂಪೆನಿಗಳ ಮೂಗಿನ ನೇರಕ್ಕೆ ಅವುಗಳಿಗೆ ಬೇಕಾಗುವಂತಹ ಚರ್ಚೆಗಳನ್ನು ನಡೆಸುತ್ತವೆ. ಇದಕ್ಕೆ ಪ್ರತಿಯಾಗಿ ಕಂಪೆನಿಗಳು ತಾವು ಕೊಳ್ಳೆ ಹೊಡೆದ ದೇಶದ ಬಡವರ ಹಾಗೂ ಸಂಪನ್ಮೂಲಗಳ ಸಂಪತ್ತಿನ ಒಂದು ಭಾಗವನ್ನು ರಾಜಕೀಯ ಪಕ್ಷಗಳಿಗೆ ಮತ್ತು ರಾಜಕಾರಣಿಗಳಿಗೆ ನೀಡುತ್ತವೆ. ಭಾರತದ ಜನತೆ ರಫೇಲ್ ವ್ಯವಹಾರವನ್ನು ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಒಂದು ಯುದ್ಧವೆಂಬಂತೆ ನೋಡದೆ ಮೋದಿ ಸರಕಾರ ಮತ್ತು ಭಾರತ ರಾಷ್ಟ್ರದ ನಡುವಿನ ಒಂದು ಯುದ್ಧವೆಂಬಂತೆ ನೋಡಬೇಕು.
(ಡಾ. ಪ್ರೇಮ್ ಸಿಂಗ್, ಸೋಷಲಿಸ್ಟ್ ಪಕ್ಷದ ಅಧ್ಯಕ್ಷರು)

ಕೃಪೆ: countercurrents.org

Writer - ಡಾ. ಪ್ರೇಮ್ ಸಿಂಗ್

contributor

Editor - ಡಾ. ಪ್ರೇಮ್ ಸಿಂಗ್

contributor

Similar News