300 ಉಗ್ರರ ಮೃತದೇಹ ಎಲ್ಲಿ ಎಂದು ಪ್ರಶ್ನಿಸಿದ್ದಕ್ಕೆ ಸಂಘಪರಿವಾರ ಕಾರ್ಯಕರ್ತರಿಂದ ಹಲ್ಲೆ: ಆರೋಪ

Update: 2019-03-02 09:24 GMT

ಬೆಂಗಳೂರು, ಮಾ.2: ಬಾಲಾಕೋಟ್ ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಕೆಲ ಮಾಧ್ಯಮಗಳು ಹೇಳಿದಂತೆ 300 ಉಗ್ರರು ಮೃತಪಟ್ಟಿರುವುದಾದರೆ ಆ ಮೃತದೇಹಗಳು ಎಲ್ಲಿ ಎಂದು ಪ್ರಶ್ನಿಸಿದ್ದಕ್ಕಾಗಿ ಸಂಘಪರಿವಾರ ಕಾರ್ಯಕರ್ತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ರಕಾಶ್ ಗೌಡ ಎಂಬವರು ಆರೋಪಿಸಿದ್ದಾರೆ.

ದೂರವಾಣಿ ಮೂಲಕ ‘ವಾರ್ತಾ ಭಾರತಿ’ಯೊಂದಿಗೆ ಮಾತನಾಡಿದ ಅವರು, “ವೈಮಾನಿಕ ದಾಳಿ ನಡೆದ ದಿನದಂದು ಬಹುತೇಕ ಮಾಧ್ಯಮಗಳು 300ಕ್ಕೂ ಅಧಿಕ ಭಯೋತ್ಪಾದಕರ ಹತ್ಯೆಯಾಗಿದೆ ಎಂದು ಹೇಳಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು, ಸಹಜ ಕುತೂಹಲದಿಂದ ಫೇಸ್‌ ಬುಕ್‌ ನಲ್ಲಿ 300 ಮೃತದೇಹಗಳ ಬಗ್ಗೆ ಪ್ರಶ್ನೆ ಮಾಡಿದ್ದೆ. ಆದರೆ, ಸಂಘಪರಿವಾರದ ಕಾರ್ಯಕರ್ತರು ನನ್ನನ್ನು ದೇಶದ್ರೋಹಿಯ ಪಟ್ಟಿಗೆ ಸೇರಿಸಿ, ನನ್ನ ಮೇಲೆ ಹಲ್ಲೆ ಮಾಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ನನ್ನ ಫೇಸ್‌ ಬುಕ್ ಬರಹಗಳಲ್ಲಿ ಯಾವುದೇ ರೀತಿಯ ದೇಶದ್ರೋಹದ ಬರಹಗಳಿಲ್ಲ. ಆದರೂ, ಸಂಘಪರಿವಾರದ ಕಾರ್ಯಕರ್ತರು ನನ್ನನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿದರು. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣಾ ಪೊಲೀಸರು ಸಹ ನನ್ನ ಸಹಾಯಕ್ಕೆ ಬರಲಿಲ್ಲ. ಅಷ್ಟೇ ಅಲ್ಲದೆ, ಎಸ್ಪಿ ಕಚೇರಿಯ ವ್ಯಾಪ್ತಿಯಲ್ಲಿಯೇ ಈ ಘಟನೆ ನಡೆದರೂ ಜಿಲ್ಲಾಡಳಿತ ನನ್ನ ರಕ್ಷಣೆಗೆ ನಿಲ್ಲಲಿಲ್ಲ” ಎಂದು ತಿಳಿಸಿದರು.

“ದೇಶದಲ್ಲಿ ಪ್ರಶ್ನೆ ಮಾಡುವವರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಜಾತ್ಯತೀತ ಪಕ್ಷಗಳ ಸರಕಾರವೇ ಆಡಳಿತದಲ್ಲಿದ್ದರೂ, ಈ ರೀತಿ ಹಲ್ಲೆಗಳು ನಡೆಯುತ್ತಿವೆ. ಗೂಂಡಾಗಿರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮತ್ತು ಸರಕಾರ ಸುಮ್ಮನಿರುವುದು, ಅವರ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟಂತಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News