ಪುಟ್ಟ ಮಗುವನ್ನು ಕೊಂದ 12ರ ಬಾಲಕಿ!

Update: 2019-03-02 04:04 GMT

ವಾಷಿಂಗ್ಟನ್, ಮಾ.2: ತನ್ನ ಬಳಿ ಆರೈಕೆಗೆ ಬಿಟ್ಟ ಒಂದು ವರ್ಷದ ಮಗುವನ್ನು ಹೊಡೆದು ಸಾಯಿಸಿದ ಆರೋಪಕ್ಕೆ 12 ವರ್ಷದ ಬಾಲಕಿಯೊಬ್ಬಳು ಈಡಾಗಿರುವ ಅಪರೂಪದ ಘಟನೆ ವರದಿಯಾಗಿದೆ.

ಮೆರಿಲ್ಯಾಂಡ್ ಪೊಲೀಸರು ಬಾಲಕಿ ವಿರುದ್ಧ ಮೊದಲ ದರ್ಜೆ ಮಕ್ಕಳ ಕಿರುಕುಳ ಆರೋಪ ಹೊರಿಸಿದ್ದಾರೆ. ಬಾಲಕಿಯ ಮೇಲೆ ಬಾಲನ್ಯಾಯ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಬಂಧಿತ ಬಾಲಕಿಯ ಹೆಸರು ಬಹಿರಂಗಪಡಿಸಿಲ್ಲ. ಆದರೆ ಬಾಲಕಿಯ ಏಟಿಗೆ ಬಲಿಯಾದ ಪುಟ್ಟ ಮಗು ಪ್ಯಾಕ್ಸ್‌ಟನ್ ಡೇವಿಸ್ ಎಂದು ಹೇಳಿದ್ದಾರೆ. ಬಾಲಕಿಯನ್ನು ಬಾಲಾಪರಾಧಿಗಳ ಸುಧಾರಣಾಗೃಹದಲ್ಲಿಡಲಾಗಿದೆ.

ಮೆರಿಲ್ಯಾಂಡ್‌ನ ಸೂಟ್‌ಲ್ಯಾಂಡ್‌ನಲ್ಲಿ ಈ ಘಟನೆ ನಡೆದಿದ್ದು, ಬಾಲಕನ ತಾಯಿ ಮಗುವನ್ನು ಬಾಲಕಿಯ ಕುಟುಂಬದವರ ವಶಕ್ಕೆ ಆರೈಕೆಗೆ ಒಪ್ಪಿಸಿ ಹೊರಗೆ ತೆರಳಿದ್ದರು. ಈ ಕುಟುಂಬ ಪ್ಯಾಕ್ಸ್‌ಟನ್ ಕುಟುಂಬಕ್ಕೆ ನಿಕಟವಾಗಿದ್ದ ಹಿನ್ನೆಲೆಯಲ್ಲಿ ಮಗುವನ್ನು ನೋಡಿಕೊಳ್ಳಲು ಬಿಟ್ಟು ಹೋಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ರಾತ್ರಿಯಿಡೀ ಮಗುವನ್ನು ಕುಟುಂಬದ ಹಿರಿಯರು ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದು ಅಪರಾಧ ತನಿಖೆ ವಿಭಾಗದ ಕಮಾಂಡರ್ ಮೇಜರ್ ಬ್ರೈನ್ ರೀಲಿ ಹೇಳಿದ್ದಾರೆ. ಮರುದಿನ ಮುಂಜಾನೆ ಆರೋಪಿ ಬಾಲಕಿಯ ತಾಯಿ ಕೆಲಸದ ನಿಮಿತ್ತ ಹೊರಹೋಗಿದ್ದರು. ಮಗುವನ್ನು ನೋಡಿಕೊಳ್ಳುವಂತೆ 12 ವರ್ಷದ ಬಾಲಕಿಯ ವಶಕ್ಕೆ ಒಪ್ಪಿಸಿದ್ದರು. ಈ ಸಂದರ್ಭದಲ್ಲಿ ಬಾಲಕಿ ಹೊಡೆದ ಹೊಡೆತಕ್ಕೆ ಮಗು ತೀವ್ರ ಗಾಯಗೊಂಡಿತ್ತು.

ಬಾಲಕಿಯ ಸಂಬಂಧಿಕರು ಮನೆಗೆ ವಾಪಸ್ ಬಂದಾಗ ಪ್ಯಾಕ್ಸ್‌ಟನ್ ತೀವ್ರವಾಗಿ ಗಾಯಗೊಂಡಿರುವುದು ಕಂಡು ತಕ್ಷಣ ತುರ್ತು ಸ್ಪಂದನ ಸಹಾಯವಾಣಿಗೆ ಕರೆ ಮಾಡಿದರು. ವಾಷಿಂಗ್ಟನ್‌ನ ಮಕ್ಕಳ ರಾಷ್ಟ್ರೀಯ ವೈದ್ಯಕೀಯ ಕೇಂದ್ರಕ್ಕೆ ಮಗುವನ್ನು ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮಗುವಿಗೆ ಹೊಡೆದದ್ದನ್ನು ಬಾಲಕಿ ಒಪ್ಪಿಕೊಂಡಿದ್ದಾಳೆ. ಆದರೆ ಯಾವ ಕಾರಣಕ್ಕೆ ಹೊಡೆದದ್ದು ಎನ್ನುವುದು ಇನ್ನೂ ತನಿಖೆಯಿಂದ ತಿಳಿಯಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News