ಟೆನಿಸ್‌ನಲ್ಲಿ ರೋಜರ್ ಫೆಡರರ್ ಶತಕ !

Update: 2019-03-03 03:37 GMT

ದುಬೈ, ಮಾ. 3 : ದುಬೈ ಓಪನ್ ಫೈನಲ್‌ ನಲ್ಲಿ ಸ್ಟೆಫಾನ್ಸ್ ಸಿಟ್ಸಿಪಸ್ ಅವರನ್ನು ರೋಜರ್ ಫೆಡರರ್ 6-4, 6-4 ನೇರ ಸೆಟ್‌ಗಳಿಂದ ಮಣಿಸುವ ಮೂಲಕ ವೃತ್ತಿ ಜೀವನದ 100ನೇ ಪ್ರಶಸ್ತಿ ಜಯಿಸಿ ಟೆನಿಸ್ ಇತಿಹಾಸದ ಪುಟದಲ್ಲಿ ದಾಖಲಾದರು.

20 ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದಿರುವ ಫೆಡರರ್ ಇಲ್ಲಿನ ಏವಿಯೇಶನ್ ಕ್ಲಬ್‌ನಲ್ಲಿ ಎಂಟನೇ ಪ್ರಶಸ್ತಿ ಗೆದ್ದ ದಾಖಲೆಯನ್ನೂ ಸೃಷ್ಟಿಸಿದರು. ಎರಡನೇ ಶ್ರೇಯಾಂಕದ ಸ್ವಿಸ್ ಆಟಗಾರ 69 ನಿಮಿಷದ ಫೈನಲ್‌ನಲ್ಲಿ ಎಲ್ಲೂ ತೀವ್ರ ಸವಾಲು ಎದುರಿಸಲೇ ಇಲ್ಲ. ಆಸ್ಟ್ರೇಲಿಯನ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ 11ನೇ ಶ್ರೇಯಾಂಕದ ಗ್ರೀಕ್ ಯುವ ಕಣ್ಮಣಿ ಎದುರಿನ ಸೋಲಿಗೆ ಅನುಭವಿ ಆಟಗಾರ ಸೇಡು ತೀರಿಸಿಕೊಂಡರು.

"ಇದು ಇಲ್ಲಿ ನನ್ನ ಎಂಟನೇ ಪ್ರಶಸ್ತಿ ಹಾಗೂ ಒಟ್ಟಾರೆ 100ನೇ ಅಂತರ್ ರಾಷ್ಟ್ರೀಯ ಪ್ರಶಸ್ತಿಯಾಗಿರುವುದರಿಂದ ತೀರಾ ವಿಶೇಷದ್ದು" ಎಂದು ಫೆಡರರ್ ಬಣ್ಣಿಸಿದರು.

"ಫೈನಲ್‌ನಲ್ಲಿ ಸ್ಟೆಫನ್ಸ್ ಸೇರಿದಂತೆ ಟೂರ್ನಿಯುದ್ದಕ್ಕೂ ಕಠಿಣ ಎದುರಾಳಿಗಳಿಂದ ಸ್ಪರ್ಧೆ ಇತ್ತು" ಎಂದು ವಿವರಿಸಿದರು. ವಿಶ್ವ ಟೆನಿಸ್ ಇತಿಹಾಸದಲ್ಲಿ 109 ಅಂತರ್ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವ ಜಿಮ್ಮಿ ಕಾನರ್ಸ್ ಅವರನ್ನು ಹೊರತುಪಡಿಸಿದರೆ ಶತಕ ಸಾಧಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು.

ಕಳೆದ ಅಕ್ಟೋಬರ್‌ನಲ್ಲಿ ಬಾಸೆಲ್‌ನಲ್ಲಿ 99ನೇ ಪ್ರಶಸ್ತಿ ಗೆದ್ದಿದ್ದರು. ಪ್ಯಾರಿಸ್ ಮಾಸ್ಟರ್ಸ್‌ ಹಾಗೂ ಆಸ್ಟ್ರೇಲಿಯನ್ ಓಪಲ್‌ನಲ್ಲಿ ಈ ದಾಖಲೆ ನಿರ್ಮಿಸುವ ಅವಕಾಶದಿಂದ ವಂಚಿತರಾಗಿದ್ದರು.

ದುಬೈ ಓಪನ್‌ನಲ್ಲಿ ಫೆಡರರ್ ಫಿಲಿಪ್ ಕೊಹೆಶ್ಚೆಬಿರ್ ಹಾಗೂ ಫೆರ್ನಾಂಡೊ ವೆರ್ಡೆಸ್ಕೊ ವಿರುದ್ಧ ಮೂರು ಸೆಟ್‌ಗಳ ಸೆಣೆಸಾಟದಲ್ಲಿ ಪ್ರಯಾಸದ ಜಯ ಸಾಧಿಸಿದ್ದರು. ಕಳೆದ ವಾರಾಂತ್ಯದಲ್ಲಿ ಮಾರ್ಸೀಲ್ ಪ್ರಶಸ್ತಿ ಗೆದ್ದಿದ್ದ ಸಿಟ್ಸಿಪಸ್ ಅವರ ಎಂಟು ಪಂದ್ಯಗಳ ಅಜೇಯ ಓಟಕ್ಕೆ ಫೆಡರರ್ ಬ್ರೇಕ್ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News