ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷರ ಬೇಷರತ್ ಕ್ಷಮೆ ಕೋರಿದ ಅರ್ನಬ್ ಗೋಸ್ವಾಮಿಯ ‘ರಿಪಬ್ಲಿಕ್ ಟಿವಿ’

Update: 2019-03-04 07:24 GMT

ಹೊಸದಿಲ್ಲಿ, ಮಾ.4: ಪುಲ್ವಾಮ ದಾಳಿಯ ನಂತರದ ಬೆಳವಣಿಗೆಯಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆ ‘ಜಮಾಅತೆ ಇಸ್ಲಾಮಿ ಕಾಶ್ಮೀರ್’ ಅನ್ನು ಕೇಂದ್ರ ಸರಕಾರ ನಿಷೇಧಿಸಿದ ಕುರಿತ ವರದಿಯಲ್ಲಿ ‘ಜಮಾಅತೆ ಇಸ್ಲಾಮಿ ಹಿಂದ್’ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ  ಮೌಲಾನ ಜಲಾಲುದ್ದೀನ್ ಉಮ್ರಿ ಅವರ ಚಿತ್ರವನ್ನು ಪ್ರದರ್ಶಿಸಿದ ಅರ್ನಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ ತಾನೆಸಗಿದ ತಪ್ಪಿಗಾಗಿ ರವಿವಾರ ಬೇಷರತ್ ಕ್ಷಮೆ ಯಾಚಿಸಿದೆ.

ವರದಿಯ ವೇಳೆ ರಿಪಬ್ಲಿಕ್ ಟಿವಿ ಮೌಲಾನ ಜಲಾಲುದ್ದೀನ್ ಉಮ್ರಿಯವರನ್ನು ‘ಜಮಾಅತೆ ಇಸ್ಲಾಮಿ ಕಾಶ್ಮೀರ್’ನ ಕಮಾಂಡರ್ ಇನ್-ಚೀಫ್ ಎಂದೂ ಬಣ್ಣಿಸಿತ್ತು.

ವಾಸ್ತವವಾಗಿ  ‘ಜಮಾಅತೆ ಇಸ್ಲಾಮಿ ಕಾಶ್ಮೀರ್’ ಹಾಗೂ ‘ಜಮಾಅತೆ ಇಸ್ಲಾಮಿ ಹಿಂದ್’ ನಡುವೆ ಯಾವುದೇ ಸಂಬಂಧವಿಲ್ಲ. ‘ಜಮಾಅತೆ ಇಸ್ಲಾಮಿ ಕಾಶ್ಮೀರ್’ ಜಮ್ಮು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಸಾಮಾಜಿಕ-ಧಾರ್ಮಿಕ ಮತು ರಾಜಕೀಯ ಸಂಘಟನೆಯಾಗಿದ್ದು, ಜಮಾಅತೆ-ಇಸ್ಲಾಮಿ ಹಿಂದ್ ನಿಂದ ಪ್ರತ್ಯೇಕಗೊಂಡು 1953ರಲ್ಲಿ ಈ ಸಂಘಟನೆ ಸ್ಥಾಪನೆಯಾಗಿತ್ತು. ವಾಸ್ತವ ಪರಾಮರ್ಶಿಸದೆ ಮೌಲಾನ ಜಲಾಲುದ್ದೀನ್ ಅವರ ಚಿತ್ರವನ್ನು ಪ್ರಕಟಿಸಿದ ರಿಪಬ್ಲಿಕ್ ಟಿವಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯೂ ತನ್ನ ಉಪಾಧ್ಯಕ್ಷರಾಗಿರುವ ಮೌಲಾನ  ಅವರನ್ನು ತಪ್ಪಾಗಿ ಬಿಂಬಿಸಿದ್ದಕ್ಕೆ ‘ರಿಪಬ್ಲಿಕ್  ಟಿವಿ’ ಕ್ಷಮೆ ಕೋರಬೇಕೆಂದು ಆಗ್ರಹಿಸಿತ್ತು.

ತರುವಾಯ ಉಗ್ರ ನೆಲೆಗಳ ಕುರಿತಾದ ವರದಿಯ ಸಂದರ್ಭ ಮಕ್ಕಾ, ಮದೀನಾ  ಚಿತ್ರಗಳನ್ನು ತೋರಿಸಿದ ‘ಸಿಎನ್‍ಎನ್ ನ್ಯೂಸ್ 18’  ವಾಹಿನಿ ಕ್ಷಮೆ ಕೋರಬೇಕೆಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಆಗ್ರಹಿಸಿದೆ. ಆದರೆ ಸಿಎನ್‍ಎನ್ ಈ ಬೇಡಿಕೆಗೆ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News