ದೇಶಭಕ್ತಿಯ ಪಾಠ ನಿಮ್ಮಿಂದ ಬೇಕಾಗಿಲ್ಲ: ಕೇಂದ್ರ ಸಚಿವ ಗೋಯಲ್ ಬಾಯಿ ಮುಚ್ಚಿಸಿದ ಪತ್ರಕರ್ತ ರಾಹುಲ್ ಕನ್ವಲ್

Update: 2019-03-05 10:35 GMT

ಹೊಸದಿಲ್ಲಿ, ಮಾ.5: ‘ಇಂಡಿಯಾ ಟುಡೇ’ ಕಾಂಕ್ಲೇವ್ ನಲ್ಲಿ  ಕೇಂದ್ರ ಸಚಿವ ಪಿಯೂಷ್ ಗೋಯಲ್ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಸಚಿವರು ಪತ್ರಕರ್ತ ರಾಹುಲ್ ಕನ್ವಲ್ ಅವರ ವೈಯಕ್ತಿಕ ನಿಂದನೆಗೈಯ್ಯಲು ಪ್ರಯತ್ನಿಸಿದಾಗ ಪತ್ರಕರ್ತ ನೀಡಿದ ತೀಕ್ಷ್ಣ ಉತ್ತರ ಎಲ್ಲರ ಪ್ರಶಂಸೆಗೊಳಗಾಗಿದೆ.

ಬಾಲಕೋಟ್ ವಾಯು ದಾಳಿ ಕುರಿತಂತೆ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳ ಬಗ್ಗೆ ಕನ್ವಲ್  ಸಚಿವರ ಗಮನ ಸೆಳೆದು ವಿವಿಧ ಮಾದ್ಯಮಗಳು ವಾಯು ದಾಳಿಯಲ್ಲಿ ಮೃತರ ಸಂಖ್ಯೆಯಲ್ಲಿನ ವ್ಯತ್ಯಾಸವಿರುವ ಬಗ್ಗೆ, ಹಾಗೂ ಕೆಲವರು 300-400 ಉಗ್ರರು ಹತರಾಗಿದ್ದಾರೆ ಹಾಗೂ ಇನ್ನು ಕೆಲವರು ಒಬ್ಬ ಮಾತ್ರ ಬಲಿಯಾಗಿದ್ದಾರೆಂದು ಹೇಳುತ್ತಿರುವುದರ ಕುರಿತಂತೆ ಉಲ್ಲೇಖಿಸಿ ``ಈ ವಾಯು ದಾಳಿ ಯಶಸ್ವಿಯಾಗಿದೆಯೆಂದು ಜಗತ್ತು, ದೇಶದ ಜನತೆ ಮತ್ತು ವಿಪಕ್ಷಗಳಿಗೆ  ವಿಶ್ವಾಸ ಮೂಡಿಸುವಂತೆ ಮಾಡಲು ಭಾರತದ ಮೇಲೆ ಸ್ವಲ್ಪ ಒತ್ತಡವಿದೆಯೇ?'' ಎಂದು ಕೇಳಿದಾಗ ಸಚಿವರು ಕೋಪದಿಂದ ``ನಿಮಗೆ ಮನವರಿಕೆಯಾಗಿದೆಯೇ ?, ನೀವು ಕೂಡಾ ನಮ್ಮ ಸೇನಾ ಪಡೆಗಳನ್ನು ಗೌಣವಾಗಿಸಲು ನಡೆಸಲಾಗುತ್ತಿರುವ ಯತ್ನದ ಭಾಗವಾಗಿದ್ದೀರಾ?, ಈ ನ್ಯೂಸ್ ರೂಂನಲ್ಲಿರುವವರು ಕನ್ವಲ್ ಹೇಳುವುದಕ್ಕೆ ಸಹಮತ ಹೊಂದಿದ್ದಾರೆಯೇ ?, ನಮ್ಮ ಸೇನಾ ಪಡೆಗಳು ಸುಳ್ಳು ಹೇಳುತ್ತಿವೆಯೇ?,'' ಎಂದು ಪ್ರಶ್ನಿಸಿದರು.

 ``ನೀವು ಪಾಕಿಸ್ತಾನ ಹೇಳುವುದನ್ನು ಒಪ್ಪುವುದಾದರೆ ಹಾಗೂ ನಿಮ್ಮ ಸಹೋದ್ಯೋಗಿಗಳು ಪಾಕಿಸ್ತಾನದ ವಾದವನ್ನು ಭಾರತದಲ್ಲಿ ಪಸರಿಸುವುದಾದರೆ ನಮ್ಮ ದೇಶ ಎತ್ತ ಸಾಗುತ್ತಿದೆ?, ಇದು ನಾಚಿಕೆಗೇಡು'' ಎಂದು ಸಚಿವರು ಹೇಳಿದಾಗ ಪತ್ರಕರ್ತನಾಗಿ ಪ್ರಶ್ನಗೆಳನ್ನು ಕೇಳುವುದು ತನ್ನ  ಕೆಲಸ ಎಂದು ರಾಹುಲ್ ಹೇಳಿದರು. ``ನಮ್ಮ ಸೇನಾ ಪಡೆಗಳು ತಮ್ಮ ಕೆಲಸ ಸರಿಯಾಗಿ  ಮಾಡಿಲ್ಲ ಎಂದು ನೀವು ಶಂಕಿಸುವುದಾದರೆ ಅದು ನಿಮ್ಮಂತಹ ದೊಡ್ಡ ಮಾಧ್ಯಮ ಸಂಸ್ಥೆಯ ಹಿರಿಯ ಪತ್ರಕರ್ತರಿಗೆ ನಾಚಿಕೆಗೇಡು'' ಎಂದು ಸಚಿವರ ಕಟು ಉತ್ತರ ನೀಡಿದಾಗ ತೀವ್ರ ಆಕ್ರೋಶಗೊಂಡ ಕನ್ವಲ್ `` ರಾಷ್ಟ್ರಭಕ್ತಿಯ ಬಗ್ಗೆ ನಿಮ್ಮಿಂದ ಅಥವಾ ಇನ್ಯಾರಿಂದಲೂ ನನಗೆ ಅಥವಾ ಇನ್ಯಾರಿಗೂ  ಪ್ರವಚನ ಬೇಕಿಲ್ಲ. ನಿಮ್ಮನ್ನು  ನಂಬದವರು  ದೇಶವಿರೋಧಿಗಳಾಗಲು ಸಾಧ್ಯವಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News