ಇಂದು ಅಥವಾ ನಾಳೆ ಹತ ಉಗ್ರರ ಸಂಖ್ಯೆ ತಿಳಿಯಲಿದೆ: ರಾಜನಾಥ್ ಸಿಂಗ್

Update: 2019-03-05 18:16 GMT

ಧುಬ್ರಿ, ಮಾ. 4: ಪಾಕಿಸ್ತಾನದ ಬಾಲಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆ ಇಂದು ಅಥವಾ ನಾಳೆ ತಿಳಿಯಬಹುದು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಭಾರತ ದಾಳಿ ನಡೆಸುವ ಮುನ್ನ ಈ ಪ್ರದೇಶದಲ್ಲಿ ಸುಮಾರು 300 ಸಕ್ರಿಯ ಮೊಬೈಲ್ ಫೋನ್‌ಗಳು ಇದ್ದ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಸಂಶೋಧನ ಸಂಸ್ಥೆ (ಎನ್‌ಟಿಆರ್‌ಒ) ಪ್ರತಿಪಾದಿಸಿದೆ. ದಾಳಿಯ ಕುರಿತು ಪ್ರತಿಪಕ್ಷ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದ ರಾಜನಾಥ್ ಸಿಂಗ್, ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಂದು ತಿಳಿಯಲು ಕಾಂಗ್ರೆಸ್ ಬಯಸಿದರೆ, ಪಾಕಿಸ್ತಾನಕ್ಕೆ ತೆರಳಿ ಉಗ್ರ ಮೃತದೇಹಗಳನ್ನು ಲೆಕ್ಕ ಹಾಕಲಿ ಎಂದು ಹೇಳಿದ್ದಾರೆ.

‘‘ಭಾರತೀಯ ವಾಯು ಪಡೆಯ ದಾಳಿಯಲ್ಲಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂದು ಇತರ ರಾಜಕೀಯ ಪಕ್ಷಗಳ ಕೆಲವು ನಾಯಕರು ಪ್ರಶ್ನಿಸುತ್ತಿದ್ದಾರೆ. ಇಂದು ಅಥವಾ ನಾಳೆ, ಅದು ತಿಳಿಯಲಿದೆ. ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನ ಹಾಗೂ ಅವರ ನಾಯಕರಿಗೆ ಗೊತ್ತಿದೆ’’ ಎಂದು ಬಿಎಸ್‌ಎಫ್‌ನ ಗಡಿ ಯೋಜನೆ ಉದ್ಘಾಟಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು. ದಾಳಿಯಲ್ಲಿ ಹತರಾದ ಉಗ್ರರ ಸಂಖ್ಯೆ ಬಗ್ಗೆ ಪ್ರಶ್ನಿಸುತ್ತಿರುವ ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡ ಅವರು, ದಾಳಿಯ ಬಳಿಕ ನಮ್ಮ ವಾಯು ಪಡೆ ಅಲ್ಲಿಗೆ ಹೋಗಿ ಎಷ್ಟು ಮೃತದೇಹಗಳು ಇವೆ ಎಂದು ಲೆಕ್ಕ ಹಾಕಬೇಕೆ ? ಎಂಥಾ ಜೋಕ್ ಎಂದು ಹೇಳಿದರು.

ಬಾಲಕೋಟ್‌ನಲ್ಲಿ 300 ಮೊಬೈಲ್ ಪೋನ್‌ಗಳು ಕಾರ್ಯ ನಿರತವಾಗಿದ್ದವು ಎಂದು ಎನ್‌ಟಿಆರ್‌ಒ ತಿಳಿಸಿದೆ. ಈ ಮೊಬೈಲ್ ಫೋನ್‌ಗಳನ್ನು ಬಳಸಿರುವುದು ಯಾರು ? ಮರಗಳೇ ? ಈಗ ನೀವು (ಪ್ರತಿಪಕ್ಷ) ಎನ್‌ಟಿಆರ್‌ಒವನ್ನು ಕೂಡಾ ನಂಬುದಿಲ್ಲವೇ ? ಎಂದು ಸಿಂಗ್ ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News