ದಿವಾಳಿಯಾಗಲಿದ್ದ ಅದಾನಿ ಕಂಪೆನಿ ಉಳಿಸಲು ಜನರ ಮೇಲೆ ಹೊರೆ ಹಾಕಿದ ಗುಜರಾತ್ ಬಿಜೆಪಿ ಸರಕಾರ !

Update: 2019-03-06 06:06 GMT

ಹೊಸದಿಲ್ಲಿ, ಮಾ.6: ದೇಶದಲ್ಲಿ 2,500ಕ್ಕೂ ಹೆಚ್ಚು ಕಂಪೆನಿಗಳೂ ದಿವಾಳಿಯಾಗಿ ಅವುಗಳಿಗೆ ಸೇರಿದ ಸೊತ್ತುಗಳನ್ನು ವಶಪಡಿಸಿ ನಂತರ ಮಾರಾಟ ಮಾಡಿ ಬ್ಯಾಂಕುಗಳು ತಮ್ಮ ಸಾಲ ವಸೂಲಾತಿಗೆ ಪ್ರಯತ್ನಿಸುತ್ತಿದ್ದರೆ, ಇದೇ ರೀತಿ ದಿವಾಳಿಯಾಗಲಿದ್ದ ಗುಜರಾತ್ ಮೂಲದ ಗೌತಮ್ ಅದಾನಿ ಮಾಲಕತ್ವದ ಅದಾನಿ ಸಮೂಹವನ್ನು ಕೇಂದ್ರದ ಮತ್ತು ಗುಜರಾತ್ ರಾಜ್ಯದ ಬಿಜೆಪಿ ಸರಕಾರಗಳು ತಮ್ಮ ಹಸ್ತಕ್ಷೇಪದಿಂದ ಜನರ ಮೇಲೆ ಹೊರೆ ಹಾಕಿ ಉಳಿಸಿವೆ.

ಸುಪ್ರೀಂ ಕೋರ್ಟ್ ತನ್ನ 2017ರ ತೀರ್ಪಿನಲ್ಲಿ ಅದಾನಿ ಉಷ್ಣ ವಿದ್ಯುತ್ ಸ್ಥಾವರಕ್ಕೆ ತಾನು ಉತ್ಪಾದಿಸುವ ವಿದ್ಯುತ್ತಿಗೆ ಹೆಚ್ಚಿನ ದರ ನಿಗದಿಪಡಿಸಲು ಅನುಮತಿಸದೇ ಇರುವ ಹೊರತಾಗಿಯೂ ಡಿಸೆಂಬರ್ 2018ರಲ್ಲಿ ಗುಜರಾತ್ ಸರಕಾರ ಆದೇಶವೊಂದನ್ನು ಹೊರಡಿಸಿ ಸ್ಥಾವರ ಉತ್ಪಾದಿಸುವ ವಿದ್ಯುತ್ತಿಗೆ ಹೆಚ್ಚಿನ ದರ ವಿಧಿಸಲು ಅನುಮತಿಸಿತ್ತು.

ಗುಜರಾತ್ ರಾಜ್ಯದ ಕರಾವಳಿ ನಗರಿ ಮುಂದ್ರಾದಲ್ಲಿ ಈ ಸ್ಥಾವರವಿದ್ದು, ಸರಕಾರದ ನಿರ್ಧಾರದಿಂದ ರಾಜ್ಯದ ವಿದ್ಯುತ್ ಗ್ರಾಹಕರು ಹೆಚ್ಚಿನ ವಿದ್ಯುತ್ ಬೆಲೆ ತೆರುವಂತಾಗಿದ್ದು, ಈ ಮೂಲಕ ಸರಕಾರ ಕಂಪೆನಿಯನ್ನು ದಿವಾಳಿಯಂಚಿನಿಂದ ಬಚಾವ್ ಮಾಡಿದೆ. ಕಡಿಮೆ ವಿದ್ಯುತ್ ದರಗಳು ಕಂಪೆನಿಗೆ ಹೊರೆಯಾಗಿ ಪರಿಣಮಿಸಿ ಸಾಲ ವಸೂಲಾತಿ ಸಾಮರ್ಥ್ಯವನ್ನು ಕಡಿಮೆಗೊಳಿಸಿದೆ ಎಂದು ಕಂಪೆನಿ ವಾದಿಸಿತ್ತು.

ಈ ನಿರ್ದಿಷ್ಟ ಉಷ್ಣ ವಿದ್ಯುತ್ ಸ್ಥಾವರವು 4,620 ಮೆವಾ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ 2,000 ಮೆ.ವಾ. ವಿದ್ಯುತ್ ಅನ್ನು 2007ರಲ್ಲಿ ಸಹಿ ಹಾಕಿದ ಒಪ್ಪಂದದಂತೆ ರಾಜ್ಯದ ವಿದ್ಯುತ್ ವಿತರಣಾ ಕಂಪೆನಿ ಗುಜರಾತ್ ಊರ್ಜಾ ವಿಕಾಸ್ ನಿಗಮಕ್ಕೆ ನೀಡಬೇಕಿದೆ.

ವಿದ್ಯುತ್ ಉತ್ಪಾದನೆಗಾಗಿ ಇಂಡೊನೇಷ್ಯಾದಿಂದ ತರಿಸುವ ಕಲ್ಲಿದ್ದಲಿನ ಬೆಲೆ ಏರಿರುವ ಕಾರಣ ನೀಡಿ 2010ರಲ್ಲಿ ಈ ಸ್ಥಾವರದ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ವಿದ್ಯುತ್ ಖರೀದಿ ದರ ಒಪ್ಪಂದದ ಕುರಿತು ಮತ್ತೆ ಮಾತುಕತೆಗಳನ್ನು ನಡೆಸಿ ದರ ಹೆಚ್ಚಿಸಲು ಅದಾನಿ ಆಗ್ರಹಿಸಿದ್ದರು.

ವರ್ಷಗಳ ಕಾಲ ನಡೆದ ಕೋರ್ಟ್ ವಿಚಾರಣೆಯ ನಂತರ ಎಪ್ರಿಲ್ 2017ರಲ್ಲಿ ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್ ಅದಾನಿ ವಾದವನ್ನು ತಿರಸ್ಕರಿಸಿತ್ತಲ್ಲದೆ, ಕಲ್ಲಿದ್ದಲನ್ನು ಇಂಡೋನೇಷ್ಯಾದಿಂದಲೇ ಒಂದು ನಿರ್ದಿಷ್ಟ ಬೆಲೆಗೆ ಖರೀದಿಸಬೇಕೆಂದೇನೂ ಒಪ್ಪಂದದಲ್ಲಿ ಹೇಳಿಲ್ಲ ಎಂದಿತ್ತು.

ಆದರೂ ಡಿಸೆಂಬರ್ 2018ರಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯ ಸಭೆಗಳನ್ನು ನಡೆಸಿದ ನಂತರ ಗುಜರಾತ್ ಸರಕಾರ ಆದೇಶ ಹೊರಡಿಸಿ ಗುಜರಾತ್ ಊರ್ಜಾ ವಿಕಾಸ್ ನಿಗಮಕ್ಕೆ ಹೆಚ್ಚಿನ ದರಗಳಲ್ಲಿ ವಿದ್ಯುತ್ ಖರೀದಿಸಲು ಅನುಮತಿಸಿ ಆದೇಶ ಹೊರಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News