ನೋಟು ರದ್ದತಿ: 80 ಸಾವಿರ ಠೇವಣಿದಾರರ ಮೇಲೆ ಐಟಿ ಹದ್ದಿನಕಣ್ಣು

Update: 2019-03-07 04:08 GMT

ಮುಂಬೈ, ಮಾ.7: ನೋಟು ರದ್ದತಿ ಅವಧಿಯಲ್ಲಿ ದೊಡ್ಡ ಮೊತ್ತದ ನಗದು ಠೇವಣಿ ಮಾಡಿ, ಆದಾಯ ತೆರಿಗೆ ಇಲಾಖೆಯ ನೋಟಿಸ್‌ಗಳಿಗೆ ಸ್ಪಂದಿಸದ ಹಾಗೂ 2016-17ನೇ ವರ್ಷದ ತೆರಿಗೆ ರಿಟರ್ನ್ಸ್ ಸಲ್ಲಿಸದ 80 ಸಾವಿರ ದೊಡ್ಡ ಠೇವಣಿದಾರರ ಆಸ್ತಿಗಳ ಮೌಲ್ಯಮಾಪನಕ್ಕೆ ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ಈ ಸಂಬಂಧ ಮಾರ್ಚ್ 6ರಂದು ಅಧಿಸೂಚನೆ ಹೊರಡಿಸಲಾಗಿದ್ದು, ಹಿರಿಯ ಅಧಿಕಾರಿಗಳಿಗೆ ನಿಗದಿತ ಕಾರ್ಯಾಚರಣೆ ವಿಧಿವಿಧಾನ (ಎಸ್‌ಓಪಿ) ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮೂಲಗಳು ಸ್ಪಷ್ಟಪಡಿಸಿವೆ.

ಇದಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆ ಸುಮಾರು 3 ಲಕ್ಷ ಮಂದಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 142(1)ರ ಅನ್ವಯ ನೋಟಿಸ್ ನೀಡಿ, 2016-17ರ ಅವಧಿಯ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಂತೆ ಮತ್ತು ನಗದು ಠೇವಣಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಆದೇಶಿಸಿತ್ತು. ಆದರೆ 87 ಸಾವಿರ ಮಂದಿ ಇದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 31ರೊಳಗೆ ಅಥವಾ ಜೂನ್ 30ರೊಳಗೆ ಅವರ ಆಸ್ತಿಯ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ.

"ಈ ತೆರಿಗೆ ಪಾವತಿದಾರರ ಮೇಲೆ ಇದೀಗ ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದು, ಅವರಿಂದ ಗರಿಷ್ಠ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಇದನ್ನು ಆಧರಿಸಿ ಅವರ ಆದಾಯವನ್ನು ಲೆಕ್ಕ ಹಾಕುತ್ತಾರೆ" ಎಂದು ನಂಗಿಯಾ ಅಡ್ವೈಸರ್‌ನ ಆಡಳಿತ ಪಾಲುದಾರ ರಾಕೇಶ್ ನಂಗಿಯಾ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News