ಪ್ರಜಾಪ್ರಭುತ್ವದ ಹಬ್ಬ ಆಚರಿಸಲು ಸಿದ್ಧರಾಗೋಣ

Update: 2019-03-10 18:34 GMT

ಕೊನೆಗೂ ದೇಶದ ಪ್ರಜಾಪ್ರಭುತ್ವದ ಹಬ್ಬದ ದಿನ ಘೋಷಣೆಯಾಗಿದೆ. ಈ ದೇಶದಲ್ಲಿ ಸದ್ಯದ ದಿನಗಳಲ್ಲಿ ಹಬ್ಬಗಳೆಂದರೆ ಜನರು ಹೆದರುವ ಸನ್ನಿವೇಶವಿದೆ. ಯಾವುದೇ ಧರ್ಮದ ಹಬ್ಬ ಬರಲಿ, ಬೀದಿಯಲ್ಲಿ ಪೊಲೀಸರು ಲಾಠಿ ಬೀಸುತ್ತಾ ಓಡಾಡತೊಡಗುತ್ತಾರೆ. ‘ಶಾಂತಿಯುತವಾಗಿ ಹಬ್ಬ ಆಚರಿಸಲು’ ಜಿಲ್ಲಾಧಿಕಾರಿಗಳು ಕರೆ ನೀಡುತ್ತಾರೆ. ಪದೇ ಪದೇ ಶಾಂತಿ ಸಭೆಗಳು ನಡೆಯುತ್ತವೆ. ಒಮ್ಮೆ ಈ ಹಬ್ಬಗಳು ಮುಗಿದರೆ ಸಾಕು ಎಂದು ಜೀವವನ್ನು ಕೈಯಲ್ಲಿಟ್ಟು ಜನಸಾಮಾನ್ಯರು ದೇವರಲ್ಲಿ ಪ್ರಾರ್ಥಿಸತೊಡಗುತ್ತಾರೆ. ಸದ್ಯಕ್ಕೆ ಘೋಷಣೆಯಾಗಿರುವುದು ಈ ದೇಶದ ಸರ್ವ ಹಬ್ಬಗಳ ಹಬ್ಬ. ಆದುದರಿಂದ, ದೇಶ ಬಹಳಷ್ಟು ಆತಂಕ, ಒಂದಿಷ್ಟು ನಿರೀಕ್ಷೆ, ಗೊಂದಲಗಳ ಜೊತೆಗೆ ಈ ಹಬ್ಬವನ್ನು ಎದುರು ನೋಡುತ್ತಿದೆ. ಈ ಬಾರಿಯ ಚುನಾವಣಾ ಫಲಿತಾಂಶ ಭಾರತದ ಭವಿಷ್ಯ ಯಾವ ದಿಕ್ಕಿಗೆ ಸಾಕಬೇಕು ಎನ್ನುವುದನ್ನು ಸ್ಪಷ್ಟವಾಗಿ ನಿರ್ದೇಶಿಸಲಿದೆ. ಆದುದರಿಂ ಚುನಾವಣೆಯ ಸಂದರ್ಭದಲ್ಲಿ ನಡೆಯುವ ಅನಾಹುತಗಳ ಜೊತೆಗೆ ಹೊರ ಬೀಳುವ ಫಲಿತಾಂಶಗಳ ಕುರಿತಂತೆಯೂ ಜನರು ತೀವ್ರ ಆತಂಕದಲ್ಲಿದ್ದಾರೆ.

ಮಾಜಿ ಚುನಾವಣಾ ಆಯುಕ್ತರೊಬ್ಬರು ‘ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಹಣ ಮತ್ತು ಹಿಂಸಾಚಾರ ನಡೆಯಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಯಾವ ಚುನಾವಣೆಗಳಿಲ್ಲದೇ ಇದ್ದರೂ ಬೀದಿಯಲ್ಲಿ ಅಕಾರಣವಾಗಿ ಅಮಾಯಕರ ಹೆಣ ಬೀಳುತ್ತಿರುವ ದಿನಗಳಲ್ಲ್ಲಿ, ಇದನ್ನು ಊಹಿಸುವುದು ಕಷ್ಟವೇನೂ ಅಲ್ಲ. ನಕಲಿ ಗೋರಕ್ಷಕರು, ಸಂಸ್ಕೃತಿ ರಕ್ಷಕರ ವೇಷದಲ್ಲಿ ಗೂಂಡಾಗಳು ಕಾನೂನನ್ನು ಕೈಗೆ ತೆಗೆದುಕೊಂಡಿರುವಾಗ ಚುನಾವಣೆಯ ಸಂದರ್ಭದಲ್ಲಿ ಇವರು ಎಸಗಬಹುದಾದ ಕೃತ್ಯಗಳ ಬಗ್ಗೆ ಜನರು ಆತಂಕ ಹೊಂದಿರುವುದು ಸಹಜ. ಸದ್ಯಕ್ಕೆ ಎಲ್ಲ ಪಕ್ಷಗಳೂ ಯಾವ ದಾರಿಯಲ್ಲಾದರೂ ಸರಿ, ಅಧಿಕಾರ ಹಿಡಿಯಲೇ ಬೇಕು ಎಂಬ ಹಟಕ್ಕೆ ಬಿದ್ದಿವೆ. ರಫೇಲ್‌ನಂತಹ ಬೃಹತ್ ಹಗರಣದ ಸುಳಿಗೆ ಸಿಲುಕಿರುವ ಅಂಬಾನಿ ಮತ್ತು ನರೇಂದ್ರ ಮೋದಿ ತಂಡಕ್ಕೆ ಯಾವ ಬೆಲೆ ತೆತ್ತಾದರೂ ಅಧಿಕಾರ ಹಿಡಿಯುವ ಅನಿವಾರ್ಯವಿದೆ. ಅಧಿಕಾರ ಕಳೆದುಕೊಂಡದ್ದೇ ಆದರೆ, ರಫೇಲ್ ಹಗರಣ ಮತ್ತೆ ತೆರೆದುಕೊಳ್ಳುತ್ತದೆ. ದೊಡ್ಡ ತಲೆಗಳು ಈ ರಫೇಲ್ ಹಗರಣಕ್ಕೆ ಬಲಿಯಾಗುವ ಸಾಧ್ಯತೆಗಳಿವೆ. ಆದುದರಿಂದ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲ, ಬೃಹತ್ ಕಾರ್ಪೊರೇಟ್ ಕುಳಗಳಿಗೂ ಈ ಚುನಾವಣೆ ಮಾಡು ಮಡಿ ಹೋರಾಟವಾಗಿದೆ. ಆದುದರಿಂದ ಈ ಉದ್ಯಮಿಗಳು ಯಥೇಚ್ಛವಾಗಿ ಪಕ್ಷಗಳಿಗೆ ದುಡ್ಡು ಸುರಿಯುವ ಸಾಧ್ಯತೆಗಳಿವೆ. ಇದೇ ಸಂದರ್ಭದಲ್ಲಿ ಸೇನೆಯ ತ್ಯಾಗ ಬಲಿದಾನಗಳ ಹೆಸರಲ್ಲಿ ಜನರ ಬಳಿ ಮತ ಯಾಚಿಸುವ ನೀಚ ಕೆಲಸಗಳನ್ನು ಕೆಲವರು ಮಾಡುತ್ತಿದ್ದಾರೆ.

ಸೇನೆಯನ್ನು ಚುನಾವಣೆಗೆ ಬಳಸುವುದನ್ನು, ಸೈನಿಕರ ನೈತಿಕ ಸ್ಥೈರ್ಯದ ಮೇಲೆ ನಡೆಸುವ ದಾಳಿಯೆಂದು ಕರೆಯಬೇಕಾಗಿದೆ. ಚುನಾವಣಾ ಆಯೋಗವೇ ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ‘‘ಸೈನಿಕರ ಹೆಸರಲ್ಲಿ , ಅವರ ವೇಷದಲ್ಲಿ ಮತ ಯಾಚಿಸುವುದನ್ನು ನಿಲ್ಲಿಸಿ’’ ಎಂದು ಅದು ಆದೇಶಿಸಿದೆ. ಆದರೆ ಚಕ್ರವರ್ತಿ ಸೂಲಿ ಬೆಲೆ ಎಂಬ ಬಿಜೆಪಿಯ ಕಾರ್ಯಕರ್ತರೊಬ್ಬರು ಸಾಮಾಜಿಕ ತಾಣಗಳಲ್ಲಿ ಬಹಿರಂಗವಾಗಿ ಯೋಧ ಅಭಿನಂದನ್‌ನ ಹೆಸರಲ್ಲಿ ಮತ ಯಾಚಿಸಲು ಹೊರಟು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈತನ ಪ್ರಕಾರ ಸೈನಿಕರೂ ಬಿಜೆಪಿಯ ಕಾರ್ಯಕರ್ತರಾಗಿ ದುಡಿಯಬೇಕಾಗಿದೆ. ‘‘ನೀವು ಯೋಧ ಅಭಿನಂದನ್ ಆಗಬೇಕಾದರೆ ಬಿಜೆಪಿಗೆ ಮತ ಹಾಕಿ....ಅದುವೇ ನೀವು ಮಾಡುವ ಸರ್ಜಿಕಲ್ ಸ್ಟ್ರೈಕ್’’ ಎಂಬರ್ಥದ ಸಾಲುಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಚುನಾವಣಾ ಆಯೋಗ ಈವರೆಗೆ ಆತನ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಮೋದಿಯನ್ನು ಮುಂದಿಟ್ಟು ಮತ ಕೇಳದೆ ಒಬ್ಬ ಸೈನಿಕನ ಹೆಸರಲ್ಲಿ ಮತ ಕೇಳುವಂತಹ ಹತಾಶ ಸನ್ನಿವೇಶ ಬಿಜೆಪಿಗೆ ಯಾಕೆ ನಿರ್ಮಾಣವಾಗಿದೆ? ಪ್ರಧಾನಮಂತ್ರಿ ನರೇಂದ್ರ ಮೋದಿ ಈ ದೇಶವನ್ನು ಅಭಿವೃದ್ಧಿಗೊಳಿಸಿದ್ದಾರೆ, ವಿಶ್ವವೇ ಗಮನಿಸುವಂತೆ ದೇಶವನ್ನು ಮುಂದಕ್ಕೆ ತಂದಿದ್ದಾರೆ ಎಂದು ಬಿಜೆಪಿಯ ನಾಯಕರು ಹೇಳುತ್ತಿದ್ದಾರೆ.

ನೋಟು ನಿಷೇಧದಿಂದ ದೇಶಕ್ಕೆ ಒಳಿತಾಗಿದೆ, ಜಿಎಸ್‌ಟಿಯಿಂದ ವ್ಯಾಪಾರ ಸುಲಭವಾಗಿದೆ, ಡಿಜಿಟಲೀಕರಣಕ್ಕೆ ದೇಶ ತೆರೆದುಕೊಂಡಿದೆ ಎಂಬಿತ್ಯಾದಿಯಾಗಿ ಬಿಜೆಪಿ ನಾಯಕರು ಕೊಚ್ಚಿಕೊಳ್ಳುತ್ತಿದ್ದಾರೆ. ಹಾಗಾದರೆ ಬಿಜೆಪಿ ನೋಟು ನಿಷೇಧವನ್ನೇ ಮುಂದಿಟ್ಟುಕೊಂಡು ಯಾಕೆ ಮತ ಯಾಚಿಸುತ್ತಿಲ್ಲ? ನೋಟು ನಿಷೇಧದಿಂದ ಆದ ಒಳಿತುಗಳನ್ನು ದೇಶಕ್ಕೆ ತಿಳಿಸಿ ಅದನ್ನು ಮತಗಳಾಗಿ ಪರಿವರ್ತಿಸುವುದೇ ಬಿಜೆಪಿಯ ಹೆಚ್ಚುಗಾರಿಕೆ. ಸರಕಾರ ದೇಶದೊಳಗಿರುವ ಎಷ್ಟು ಪ್ರಮಾಣದ ಕಪ್ಪುಹಣವನ್ನು ವಶಪಡಿಸಿಕೊಂಡಿತು ಎನ್ನುವ ವಿವರಗಳೇ ಬಿಜೆಪಿಯನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬಹುದು. ಭಯೋತ್ಪಾದನೆಯನ್ನು ಬಗ್ಗು ಬಡಿದಿದ್ದೇನೆ ಎಂದು ಮೋದಿಯವರು ಹೇಳುತ್ತಿದ್ದಾರೆ. ಆದರೆ ದೇಶದಲ್ಲಿ ಅತಿ ಹೆಚ್ಚು ಉಗ್ರರ ದಾಳಿ ನಡೆದಿರುವುದು ಕಳೆದ ನಾಲ್ಕು ವರ್ಷಗಳಲ್ಲಿ ಎನ್ನುವ ಅಂಕಿಅಂಶಗಳಿಗೆ ಮೋದಿಯವರು ಯಾವ ಸಮರ್ಥನೆಯನ್ನು ನೀಡುತ್ತಾರೆ? ನಾಲ್ಕು ವರ್ಷಗಳ ಹಿಂದೆ ಕಾಶ್ಮೀರದ ಸ್ಥಿತಿ ಇಷ್ಟರಮಟ್ಟಿಗೆ ಪ್ರಕ್ಷುಬ್ಧವಾಗಿರಲಿಲ್ಲ. ನಮ್ಮ ಸೈನಿಕರಿಬ್ಬರ ಕತ್ತರಿಸಲ್ಪಟ್ಟ ತಲೆಯನ್ನು ಮುಂದಿಟ್ಟುಕೊಂಡು 2014ರಲ್ಲಿ ಬಿಜೆಪಿ ಮತ ಯಾಚಿಸಿತು. ಜನರೂ ಬಿಜೆಪಿಯ ಮಾತನ್ನು ನಂಬಿದರು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ನಮ್ಮ ಸೈನಿಕರಿಗೆ ಒಳಿತಾಗಬಹುದು ಎಂದು ಭಾವಿಸಿದರು.

ಕಾಶ್ಮೀರದಲ್ಲಿ ಉಗ್ರರ ಉಪಟಳ ನಿಲ್ಲಬಹುದು ಎಂಬ ಆಶಾವಾದ ಜನರಲ್ಲಿತ್ತು. ಆದರೆ 2019ರಲ್ಲಿ ನಮ್ಮ ನಲವತ್ತು ಸೈನಿಕರು ನೋಡನೋಡುತ್ತಿದ್ದಂತೆಯೇ ಏಕಾಂಗಿ ಉಗ್ರನಿಗೆ ಬಲಿಯಾಗಬೇಕಾಯಿತು. ಈಗ ಮೋದಿ ನೇತೃತ್ವದ ಸರಕಾರ ಅಸ್ತಿತ್ವದಲ್ಲಿದೆ. ಅಂದಿನ ದುರಂತಕ್ಕೆ ಆಗಿನ ಯುಪಿಎ ಸರಕಾರ ಹೊಣೆಯಾಗಿದ್ದರೆ, ಈಗಿನ ದುರಂತಕ್ಕೆ ಮೋದಿ ನೇತೃತ್ವದ ಸರಕಾರವೇ ಹೊಣೆಯಾಗಬೇಕಲ್ಲ? ನಮ್ಮ ನಲವತ್ತು ಸೈನಿಕರನ್ನು ರಕ್ಷಿಸಲು ಸಾಧ್ಯವಾಗದೇ ಇರುವುದಕ್ಕೆ ಮೋದಿ ಚುನಾವಣೆಯಲ್ಲಿ ಯಾವ ಕಾರಣವನ್ನು ನೀಡುತ್ತಾರೆ? ನಮ್ಮ ಸೈನಿಕರ ಅಳಲಿಗೆ ಧ್ವನಿಯಾಗಲು ಸಾಧ್ಯವಾಗದ ಸರಕಾರ, ಈ ಚುನಾವಣೆಯಲ್ಲಿ ಯಾವ ಮುಖದಲ್ಲಿ ಸೈನಿಕರ ಹೆಸರನ್ನು ಹೇಳಿ ಮತ ಯಾಚಿಸುತ್ತದೆ? ಇದು ಹುತಾತ್ಮ ಸೈನಿಕರಿಗೆ ಬಿಜೆಪಿ ನಾಯಕರು ಎಸಗುತ್ತಿರುವ ದ್ರೋಹವಲ್ಲವೇ? ದೇಶವನ್ನು ಪ್ರೀತಿಸುವ ಯಾವ ಪ್ರಜೆಯೂ ಈ ದ್ರೋಹವನ್ನು ಸಹಿಸಲಾರ. ಆದುದರಿಂದ, ತಕ್ಷಣ ಚುನಾವಣೆಗಾಗಿ ಹುತಾತ್ಮ ಯೋಧರ ಮೃತದೇಹಗಳನ್ನು ಬಳಸುವ ನೀಚ ರಾಜಕೀಯದಿಂದ ಬಿಜೆಪಿ ಸಹಿತ ಎಲ್ಲ ರಾಜಕೀಯ ಪಕ್ಷಗಳು ಹಿಂದೆ ಸರಿಯಬೇಕಾಗಿದೆ.

ಚುನಾವಣೆಯ ಸಂದರ್ಭದಲ್ಲಿ ಬರೇ ರಾಜಕೀಯ ನಾಯಕರನ್ನು ಟೀಕಿಸುವುದರಿಂದಷ್ಟೇ ಜನರ ಹೊಣೆಗಾರಿಕೆ ಮುಗಿಯುವುದಿಲ್ಲ. ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಯುವುದರ ಹಿಂದೆ, ಮತದಾರರ ಭ್ರಷ್ಟತೆಯ ಪಾಲೂ ಇದೆ. ದೇಶದ ಪ್ರಜಾಸತ್ತೆ ಅತ್ಯಂತ ನಿರ್ಣಾಯಕ ಹಂತದಲ್ಲಿ ಬಂದು ನಿಂತಿದೆ. ಯಾವುದೇ ಭಾವನಾತ್ಮಕ ಹೇಳಿಕೆಗಳಿಗೆ ಬಲಿಯಾಗದೆ, ಹಣ, ಹೆಂಡಗಳಿಗೆ ಸೋಲದೆ ಈ ದೇಶದ ಪ್ರಜಾಸತ್ತೆಯನ್ನು ಗೆಲ್ಲಿಸುವುದು ಮತದಾರರ ಜವಾಬ್ದಾರಿ. ನಾವು ನೀಡುವ ಮತವೇ ಈ ದೇಶದ ಭವಿಷ್ಯವನ್ನು ನಿರ್ಣಯಿಸಲಿದೆ. ಈ ದೇಶದ ಪ್ರಜಾಸತ್ತೆಯ ಅಳಿವು ಉಳಿವಿನ ಹಿಂದೆ ನೂರಾರು ವರ್ಷಗಳ ತ್ಯಾಗ, ಬಲಿದಾಗಳ ಇತಿಹಾಸವಿದೆ. ಆ ಇತಿಹಾಸ ನೆನಪಿನಲ್ಲಿಟ್ಟುಕೊಂಡು, ಮತದಾರರು ದೇಶದ ಭವಿಷ್ಯವನ್ನು ಬರೆಯಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News