ಜೊಕೊವಿಕ್, ವೀನಸ್ ಜಯಭೇರಿ

Update: 2019-03-10 19:26 GMT

ಇಂಡಿಯನ್ ವೆಲ್ಸ್, ಮಾ.10: ಖ್ಯಾತ ಆಟಗಾರ ಸರ್ಬಿಯದ ನೊವಾಕ್ ಜೊಕೊವಿಕ್ ಅಮೆರಿಕದ ಜಾರ್ನ್ ಫ್ರಾಟಂಗೆಲೊ ಅವರನ್ನು 7-6(5), 6-2 ಸೆಟ್‌ಗಳಿಂದ ಮಣಿಸಿ ಇಂಡಿಯನ್ ವೆಲ್ಸ್ ಟೂರ್ನಿಯ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಈ ಟೂರ್ನಿಯಲ್ಲಿ ಜೊಕೊವಿಕ್ ಸಾಧಿಸಿದ 50ನೇ ಗೆಲುವು ಇದಾಗಿದೆ. ಎಟಿಪಿ ಮಾಸ್ಟರ್ಸ್ 1000 ವಿಭಾಗದ ಟೂರ್ನಿಗಳಲ್ಲಿ ಅವರ ಗರಿಷ್ಠ ಗೆಲುವು ಇದಾಗಿದೆ. ವಿಶ್ವದ ಅಗ್ರ ಶ್ರೇಯಾಂಕದ ಆಟಗಾರನಾಗಿರುವ ಜೊಕೊವಿಕ್ 90 ನಿಮಿಷಗಳ ಅವಧಿಯಲ್ಲಿ ಎದುರಾಳಿ ವಿರುದ್ಧ ಗೆಲುವು ಸಾಧಿಸಿ 11-1ರ ಹೆಡ್ ಟು ಹೆಡ್ ಗೆಲುವಿನ ದಾಖಲೆಯನ್ನು ಉತ್ತಮಪಡಿಸಿಕೊಂಡರು.

ಮಹಿಳಾ ಸಿಂಗಲ್ಸ್‌ನ ತಮ್ಮ ಆರಂಭಿಕ ಪಂದ್ಯದಲ್ಲಿ ವೀನಸ್ ವಿಲಿಯಮ್ಸ್ ಅವರು ವಿಶ್ವದ ನಂ.3 ಪೆಟ್ರಾ ಕ್ವಿಟೊವಾ ಅವರನ್ನು 4-6, 7-5, 6-4 ಸೆಟ್‌ಗಳಿಂದ ಮಣಿಸಿ ಎರಡನೇ ಸುತ್ತಿಗೆ ಕಾಲಿಟ್ಟರು.

ಸುಮಾರು 2 ಗಂಟೆ 30 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 10 ಏಸ್‌ಗಳನ್ನು ಸರ್ವ್ ಮಾಡಿದ ಕ್ವಿಟೊವಾ 10 ಅನಗತ್ಯ ತಪ್ಪುಗಳನ್ನು ಎಸಗಿದರು. ಅವರು ಈ ಟೂರ್ನಿಯಲ್ಲಿ ಇದುವರೆಗೆ ಸೋಲನುಭವಿಸಿದ ಗರಿಷ್ಠ ಶ್ರೇಯಾಂಕದ ಆಟಗಾರ್ತಿಯಾಗಿದ್ದಾರೆ. ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಮೂರು ಬಾರಿ ಸೆಮಿಫೈನಲ್ ತಲುಪಿರುವ ವೀನಸ್, ಸದ್ಯ ಟೂರ್ನಿಯಲ್ಲಿ ಸ್ಪರ್ಧಿಸಿರುವ ಹಿರಿಯ (38) ಆಟಗಾರ್ತಿಯಾಗಿದ್ದಾರೆ.

 ಇನ್ನುಳಿದ ಪಂದ್ಯಗಳಲ್ಲಿ ವಿಂಬಲ್ಡನ್ ಚಾಂಪಿಯನ್ ಎಂಜೆಲಿಕ್ ಕೆರ್ಬರ್ ಅವರು ಯುಲಿಯಾ ಪುಟಿಂಟ್ಸೆವಾ ಅವರನ್ನು ಮಣಿಸಿದರೆ, ಆರ್ಯನ್ ಸಬಾಲೆಂಕಾ,ಅನಾಸ್ತೆಸಿಜಾ ಸೆವಾತ್ಸೊವಾ, ಮಿಲೊಸ್ ರಾವೊನಿಕ್, ಗೇಲ್ ಮೊಂಫಿಲ್ಸ್, ಗಿಲ್ಲೆಸ್ ಸಿಮೊನ್ ಮತ್ತಿತರರು ತಮ್ಮ ಪಂದ್ಯಗಳಲ್ಲಿ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News