ನೋಟು ರದ್ದತಿ ಕಪ್ಪುಹಣ ತಡೆಗೆ ನೆರವಾಗದು ಎಂದು ಹೇಳಿದ್ದ ಆರ್‌ಬಿಐ!

Update: 2019-03-11 04:41 GMT

ಮುಂಬೈ, ಮಾ.11: ಮೋದಿ ಸರ್ಕಾರದ ನೋಟು ರದ್ದತಿ ನಿರ್ಧಾರ, ದೇಶದಲ್ಲಿ ಕಪ್ಪು ಹಣ ನಿಯಂತ್ರಿಸಲು ಯಾವುದೇ ರೀತಿಯಲ್ಲಿ ನೆರವಾಗಲಾರದು ಎಂದು ಆರ್‌ಬಿಐ ಸ್ಪಷ್ಟಪಡಿಸಿದ ಅಂಶ ಇದೀಗ ಬಹಿರಂಗವಾಗಿದೆ.

ಆದರೆ ವಿತ್ತೀಯ ಸೇರ್ಪಡೆ ಹಾಗೂ ಡಿಜಿಟಲ್ ಪಾವತಿಗೆ ಇದು ಅವಕಾಶ ಮಾಡಿಕೊಡುವ ಕಾರಣಕ್ಕೆ ಈ ನಿರ್ಧಾರವನ್ನು ಬೆಂಬಲಿಸುವುದಾಗಿ, ಈ ನಿರ್ಧಾರ ಪ್ರಕಟನೆಗೆ ಮೂರು ಗಂಟೆ ಮೊದಲು ನಡೆದ ಆರ್‌ಬಿಐ ಸಭೆ ನಿರ್ಣಯ ಆಂಗೀಕರಿಸಿದ್ದು, ಇದೀಗ ಬೆಳಕಿಗೆ ಬಂದಿದೆ.

ನೋಟು ರದ್ದತಿ ದೇಶದಲ್ಲಿ ಕಪ್ಪುಹಣವನ್ನು ನಿಯಂತ್ರಿಸಲು ನೆರವಾಗಲಿದೆ. ಜತೆಗೆ 500 ಹಾಗೂ 1,000 ರೂಪಾಯಿ ನೋಟುಗಳ ಏರಿಕೆಗೆ ಕಡಿವಾಣ ಹಾಕಲಿದೆ. ನಕಲಿ ನೋಟು ಜಾಲವನ್ನು ನಿಯಂತ್ರಿಸಲಿದೆ. ಇ-ಪಾವತಿ ಹಾಗೂ ವಿತ್ತೀಯ ಸೇರ್ಪಡೆಗೆ ಉತ್ತೇಜನ ನೀಡಲಿದೆ ಎಂದು ಸರ್ಕಾರ ಪ್ರತಿಪಾದಿಸುತ್ತಾ ಬಂದಿತ್ತು. ಆದರೆ ಮೋದಿ ಈ ಘೋಷಣೆಗೆ ಮೂರು ಗಂಟೆ ಮೊದಲು ಅಂದರೆ 2016ರ ನವೆಂಬರ್ 8ರಂದು ಸಂಜೆ 5:30ಕ್ಕೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿತ್ತು.

"ಬಹುತೇಕ ಕಪ್ಪು ಹಣವನ್ನು ನಗದು ರೂಪದಲ್ಲಿ ಇಟ್ಟುಕೊಂಡಿಲ್ಲ. ಬದಲಾಗಿ ಚಿನ್ನ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲಾಗಿದೆ. ಆದ್ದರಿಂದ ಈ ನಡೆಯಿಂದ ಇಂಥ ಆಸ್ತಿಗಳ ಮೇಲೆ ಯಾವುದೇ ಭೌತಿಕ ಪರಿಣಾಮವಾಗದು" ಎಂದು ಆರ್.ಬಿ.ಐ. ಆಡಳಿತ ಮಂಡಳಿ ನಿರ್ದೇಶಕರು ಸ್ಪಷ್ಟಪಡಿಸಿದ್ದರು.

ಆರ್ಥಿಕ ವಿಸ್ತರಣೆಗಿಂತ ವೇಗವಾಗಿ ಅಧಿಕ ಮೌಲ್ಯದ ನೋಟುಗಳು ಹೆಚ್ಚುತ್ತಿವೆ ಎಂಬ ಸರ್ಕಾರದ ವಾದವನ್ನೂ ಸಭೆ ತಳ್ಳಿಹಾಕಿತ್ತು. ಹಣದುಬ್ಬರಕ್ಕೆ ಇದು ಹೊಂದಾಣಿಕೆಯಾಗಿದ್ದು, ದೊಡ್ಡ ಪ್ರಮಾಣದ ವ್ಯತ್ಯಾಸವಾಗದು ಎಂದು ಸಭೆ ಅಭಿಪ್ರಾಯಪಟ್ಟಿತ್ತು. ಕಳ್ಳನೋಟಿನ ದಂಧೆ ಆತಂಕಕಾರಿಯಾದರೂ, ಚಲಾವಣೆಯಲ್ಲಿರುವ ಒಟ್ಟು ನೋಟುಗಳಿಗೆ ಹೋಲಿಸಿದರೆ 400 ಕೋಟಿ ರೂ. ಮೌಲ್ಯದ ಕಳ್ಳನೋಟುಗಳು ಹೆಚ್ಚಿನ ಪರಿಣಾಮವನ್ನೇನೂ ಬೀರಲು ಸಾಧ್ಯವಿಲ್ಲ ಎನ್ನುವುದು ಆರ್‌ಬಿಐ ವಾದವಾಗಿತ್ತು. ಜತೆಗೆ ಅಲ್ಪಾವಧಿಯಲ್ಲಿ ದೇಶದ ಜಿಡಿಪಿ ಪ್ರಗತಿಯೂ ಇದು ಮಾರಕವಾಗಲಿದೆ ಎಂದು ಎಚ್ಚರಿಕೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News