ಲವ್ ಜಿಹಾದ್ ಪ್ರೋತ್ಸಾಹಿಸುವ 'ಸರ್ಫ್ ಎಕ್ಸೆಲ್' !

Update: 2019-03-11 05:29 GMT

ಹೋಳಿ ಹಬ್ಬದ ಸಂದರ್ಭಕ್ಕಾಗಿ ಖ್ಯಾತ ಡಿಟರ್ಜೆಂಟ್ ಬ್ರಾಂಡ್ ಸರ್ಫ್ ಎಕ್ಸೆಲ್ ಮಾಡಿರುವ ಜಾಹೀರಾತೊಂದು ಈಗ ವಿವಾದಕ್ಕೀಡಾಗಿದೆ. ಫೆಬ್ರವರಿ 27ರಂದು ಸರ್ಫ್ ಎಕ್ಸೆಲ್ ಈ ಜಾಹೀರಾತು ಬಿಡುಗಡೆ ಮಾಡಿತ್ತು. 

ರಂಗ್ ಲಾಯೇ ಸಂಗ್ (ಬಣ್ಣಗಳು ನಮ್ಮನ್ನು ಒಂದುಗೂಡಿಸುತ್ತವೆ) ಎಂಬ ಹೆಸರಿನ ಈ ಜಾಹೀರಾತಿನಲ್ಲಿ ಒಬ್ಬಳು ಹಿಂದೂ ಬಾಲಕಿ ಹಾಗೂ ಮುಸ್ಲಿಂ ಬಾಲಕ ಇದ್ದಾರೆ. ಮಸೀದಿಗೆ ಹೊರಟ ಮುಸ್ಲಿಂ ಬಾಲಕನ ಬಟ್ಟೆಗೆ ಬಣ್ಣ ತಾಗದಂತೆ ಹಿಂದೂ ಬಾಲಕಿ ತನ್ನ ಮೇಲೆ ಬಣ್ಣ ಹಾಕಿಸಿಕೊಂಡು ಆತನನ್ನು ಮಸೀದಿ ಬಾಗಿಲಿಗೆ ಬಿಡುತ್ತಾಳೆ. ದಾಗ್ ಅಚ್ಛೇ ಹೈ (ಕಲೆ ಒಳ್ಳೆಯದು) ಎಂಬ ಟ್ಯಾಗ್ ಲೈನ್ ಜೊತೆ ಜಾಹೀರಾತು ಮುಕ್ತಾಯವಾಗುತ್ತದೆ. 

ಈ ಜಾಹೀರಾತು ಈಗಾಗಲೇ ಯೂಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿದ್ದು ಸುಮಾರು ೯೦ ಲಕ್ಷ ಜನ ವೀಕ್ಷಿಸಿದ್ದಾರೆ.  

ಆದರೆ ಸಂಘಪರಿವಾರದ ಸಂಘಟನೆಗಳಿಗೆ ಮತ್ತು ಬೆಂಬಲಿಗರಿಗೆ ಮಾತ್ರ ಈ ಜಾಹೀರಾತು ಇಷ್ಟವಾಗಿಲ್ಲ. ಇದರಲ್ಲಿ ಲವ್ ಜಿಹಾದ್ ಪ್ರೋತ್ಸಾಹಿಸಲಾಗಿದೆ, ಬಣ್ಣವನ್ನು ಕಲೆ ಎಂದು ಹೇಳಿ ಹೋಳಿ ಹಬ್ಬವನ್ನು ಅವಮಾನಿಸಲಾಗಿದೆ ಇತ್ಯಾದಿ  ಕಾರಣಗಳನ್ನು ನೀಡಿ ಬಲಪಂಥೀಯರು ಸರ್ಫ್ ಎಕ್ಸೆಲ್ ವಿರುದ್ಧ ಹರಿಹಾಯ್ದಿದ್ದಾರೆ. ಸರ್ಫ್ ಎಕ್ಸೆಲ್ ಅನ್ನು ಬಹಿಷ್ಕರಿಸಬೇಕು ಎಂದೂ ಅಭಿಯಾನ ಪ್ರಾರಂಭಿಸಲಾಗಿದೆ. #boycottSurfexcel ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡಲು ಯತ್ನ ನಡೆದಿದೆ. 

ಇದೇ ಸಂದರ್ಭದಲ್ಲಿ ಜಾಹೀರಾತು ಭಾರತದ ಬಹುತ್ವ ಗುಣಕ್ಕೆ ತಕ್ಕುದಾಗಿದೆ. ಜಾತ್ಯತೀತ ತತ್ವವನ್ನು ಎತ್ತಿ ಹಿಡಿಯುತ್ತಿದೆ ಎಂದು ಅದರ ಪರವಾಗಿಯೂ ಸಾಕಷ್ಟು ಮಾತುಗಳು ಕೇಳಿಬಂದಿವೆ. ಅದನ್ನು ವಿರೋಧಿಸುವವರು ಭಾರತದ ಬಹುತ್ವ ಕಲ್ಪನೆಯ ವಿರೋಧಿಗಳು ಎಂಬ ಟೀಕೆಯೂ ಬಂದಿದೆ. 

ಒಟ್ಟಾರೆ ಸುದ್ದಿಯಲ್ಲಿರುವ ಚರ್ಚೆಯಾಗುವ ಸರ್ಫ್ ಎಕ್ಸೆಲ್ ಉದ್ದೇಶ ಮಾತ್ರ ಈಡೇರಿದೆ ! 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News