ದೇವೇಗೌಡರಿಗೆ ಹೆದರಿ ಕ್ಷೇತ್ರದಿಂದ ಪಲಾಯನ ಮಾಡಲ್ಲ: ಸದಾನಂದ ಗೌಡ

Update: 2019-03-11 14:14 GMT

ಬೆಂಗಳೂರು, ಮಾ.11: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ನಮಗೆ ಭಯವಿಲ್ಲ, ಗೌರವವಿದೆ. ಅವರು ಇಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಕಾರಣಕ್ಕೆ ಕ್ಷೇತ್ರದಿಂದ ಪಲಾಯನ ಮಾಡುತ್ತಿರುವೆ ಎಂಬ ಸುದ್ದಿಯು ಸತ್ಯಕ್ಕೆ ದೂರವಾದುದಾಗಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಆಗಿರುವ ಸಾಧನೆಗಳ ಬಗ್ಗೆ ಕಿರುಪುಸ್ತಕ ಬಿಡುಗಡೆ ಮಾಡಿ ಪಾಲ್ಗೊಂಡು ಅವರು ಮಾತನಾಡಿದರು.

ದೇವೇಗೌಡರ ಸ್ಪರ್ಧೆಯಿಂದ ಹೆದರಿಕೊಂಡು ಸಚಿವ ಬೇರೆ ಕ್ಷೇತ್ರಕ್ಕೆ ಹಾರಲಿದ್ದೇನೆ, ಪಲಾಯನ ಮಾಡುತ್ತಿರುವೆ ಎಂಬ ಸುದ್ದಿಗಳನ್ನು ಹಬ್ಬಿಸಲಾಗಿದೆ. ಆದರೆ, ನಾನು ಯಾರಿಗೂ ಹೆದರುವುದಿಲ್ಲ, ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ ಎಂದು ಹೇಳಿದರು.

ಪಕ್ಷದ ವರಿಷ್ಠರು ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಸೂಚಿಸುತ್ತಾರೋ ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಯಾರಿಗೂ ಹೆದರಿ ಕ್ಷೇತ್ರಬಿಟ್ಟು ಹೋಗುವುದಿಲ್ಲ. ಮಾಜಿ ಪ್ರಧಾನಿಯೇ ಬರಲಿ, ಯಾರೆ ಬಂದರೂ ಕ್ಷೇತ್ರ ಬಿಟ್ಟುಕೊಡಲ್ಲ ಎಂದು ತಿಳಿಸಿದರು.

ಸ್ವಪಕ್ಷೀಯರು ಸೇರಿದಂತೆ ಹಲವು ಮುಖಂಡರು ತಮ್ಮ ಬಗ್ಗೆ ಸುಮ್ಮನೇ ಪಲಾಯನ ಸುದ್ದಿಗಳನ್ನು ಹರಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ರೀತಿಯ ತಪ್ಪು ಸಂದೇಶ ರವಾನೆ ಮಾಡುವುದರಿಂದ ಪಕ್ಷಕ್ಕೆ ಮುಜುಗರಕ್ಕೀಡು ಮಾಡಿದಂತಾಗುತ್ತದೆ ಎಂದು ನುಡಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದ್ದೇನೆ. ಸಾಧನೆಯ ಮೇಲೆ ಮತ ಕೇಳುತ್ತೇನೆ ಎಂದ ಅವರು, ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವನಾಗಿ ರಾಜ್ಯದ ನೆಲ, ಜಲ ವಿಚಾರದಲ್ಲೂ ರಾಜ್ಯದ ಹಿತಾಸಕ್ತಿ ಕಾಪಾಡಿದ್ದೇನೆ. ರಾಜ್ಯದ ವಿಚಾರ ಬಂದಾಗ ಕೇಂದ್ರ ಮಟ್ಟದಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದು ಅವರು ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ರಕ್ಷಣಾ ಇಲಾಖೆಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸಿ ರಸ್ತೆ, ಶಾಲೆ ಮತ್ತಿತರ ಮೂಲ ಸೌಕರ್ಯಗಳಿಗೆ ರಕ್ಷಣಾ ಇಲಾಖೆಯ ಜಮೀನನ್ನು ಕೊಡಿಸಿದ್ದು ತನ್ನ ಮಹತ್ತರ ಸಾಧನೆ ಎಂದು ಹೇಳಿದರು.

ಬೆಂಗಳೂರು ಸಬ್ ಅರ್ಬನ್ ರೈಲ್ವೆ ಅನುಷ್ಠಾನದಿಂದ ಹಿಡಿದು ಕಾವೇರಿ, ಮಹದಾಯಿ ಹೀಗೆ ರಾಜ್ಯಕ್ಕೆ ಸಂಬಂಧಿಸಿದ ಹತ್ತು ಹಲವು ವಿಚಾರಗಳಲ್ಲಿ ರಾಜ್ಯಕ್ಕೆ ನ್ಯಾಯ ಒದಗಿಸಿದ ಹೆಮ್ಮೆ ತನ್ನದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News