ಟ್ರ್ಯಾಕ್ಟರ್ ಢಿಕ್ಕಿ: ಮಗು ಮೃತ್ಯು-ಪೋಷಕರಿಗೆ ಗಂಭೀರ ಗಾಯ
ಬೆಂಗಳೂರು, ಮಾ.11: ಟ್ರ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮಗು ಮೃತಪಟ್ಟು, ಪೋಷಕರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಬಿಟಿಎಂ ಲೇಔಟ್‌ನ ಎರಡನೇ ಹಂತದಲ್ಲಿ ನಡೆದಿದೆ.
ಬಿಳೇಕಹಳ್ಳಿಯ ಸಹರಾ (3) ಮೃತ ಮಗು ಎಂದು ತಿಳಿದುಬಂದಿದ್ದು, ಆಕೆಯ ತಂದೆ ಸತೀಶ್ ಮಾಂಡ್ರೆ, ತಾಯಿ ರಜಿನಿ ಮಾಂಡ್ರೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಟೇಲ್‌ವೊಂದರ ಕೆಲಸ ಮಾಡುತ್ತಿದ್ದ ಸತೀಶ್ ಮಾಂಡ್ರೆ, ರವಿವಾರ ಸಂಜೆ ಸ್ಕೂಟರ್‌ನಲ್ಲಿ ಪತ್ನಿ ರಜಿನಿ ಮಾಂಡ್ರೆ, ಪುತ್ರಿ ಸಹರಾಳನ್ನು ಕೂರಿಸಿಕೊಂಡು ಬಿಟಿಎಂ ಲೇಔಟ್‌ನ 2ನೇ ಹಂತದ 2ನೇ ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಢಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಸಹರಾ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟರೆ, ಪೋಷಕರು ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿರುವ ಮೈಕೋ ಲೇಔಟ್ ಸಂಚಾರ ಪೊಲೀಸರು, ಟ್ರ್ಯಾಕ್ಟರ್ ಚಾಲಕ ಇಂದ್ರೇಶ್ ಎಂಬಾತನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.