ಪ್ರತ್ಯೇಕ ಅಪಘಾತ ಪ್ರಕರಣ: ಮಹಿಳೆ ಸೇರಿ ಮೂವರು ಮೃತ್ಯು

Update: 2019-03-11 15:01 GMT

ಬೆಂಗಳೂರು, ಮಾ.11: ನಗರ ವ್ಯಾಪ್ತಿಯ ಪ್ರತ್ಯೇಕ ಮೂವರು ಪ್ರಕರಣಗಳಲ್ಲಿ ಮಹಿಳೆಯೊಬ್ಬಾಕೆ ಸೇರಿದಂತೆ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಮಹಿಳೆ ಸಾವು: ಎಲೆಕ್ಟ್ರಾನಿಕ್ ಸಿಟಿಯ ನೈಸ್ ರಸ್ತೆಯ ಬೇಗೂರು ಸೇತುವೆ ಬಳಿ ವೇಗವಾಗಿ ಬಂದ ಕಾರು ಹರಿದು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಮೃತ ಮಹಿಳೆಗೆ 35 ವರ್ಷ ವಯಸ್ಸಾಗಿದ್ದು, ಕೂಲಿ ಕಾರ್ಮಿಕರಂತೆ ಕಾಣುತ್ತಿದ್ದಾರೆ. ಸದ್ಯಕ್ಕೆ ಆಕೆಯ ಹೆಸರು, ವಿಳಾಸ ಪತ್ತೆಯಾಗಿಲ್ಲ. ರವಿವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಸ್ ಢಿಕ್ಕಿ: ದೇವನಹಳ್ಳಿಯ ಬಳ್ಳಾರಿ-ಬೆಂಗಳೂರು ರಸ್ತೆಯ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ಬಸ್ ಹರಿದು ಶ್ರಿನಿವಾಸ್(46) ಎಂಬವರು ಮೃತಪಟ್ಟಿದ್ದಾರೆ.

ಕೂಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಕೆಲಸ ಮುಗಿಸಿಕೊಂಡು ಮನೆಗೆ ರವಿವಾರ ರಾತ್ರಿ 7:30ರ ವೇಳೆ ನಡೆದುಕೊಂಡು ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಬಸ್ ಹರಿದು ಈ ದುರ್ಘಟನೆ ಸಂಭಸಿದೆ.

ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೊಲೀಸರು, ಬಸ್ ಚಾಲಕ ವೆಂಕಟಸ್ವಾಮಿ ಎಂಬಾತನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿ ಮೃತ್ಯ: ಹೊಸೂರು ರಸ್ತೆಯ ಸಿಂಗಸಂದ್ರ ಗೇಟ್ ಬಳಿ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಟೆಂಪೋ ಟ್ರಾವೆಲರ್ ಹರಿದು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯು ಸುಮಾರು 30 ವರ್ಷದವರಾಗಿದ್ದು, ಭಿಕ್ಷುಕರಂತೆ ಕಾಣುತ್ತಿದ್ದಾರೆ. ಅವರ ಹೆಸರು ಪತ್ತೆಯಾಗಿಲ್ಲ. ಕಳೆದ ಮಾರ್ಚ್ 8 ರಂದು ಮುಂಜಾನೆ 5:30ರ ವೇಳೆ ಪಾದಚಾರಿಯು ರಸ್ತೆಯಲ್ಲಿ ಹೋಗುತ್ತಿದ್ದಾಗ ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.

ಪ್ರಕರಣ ದಾಖಲಿಸಿರುವ ಹುಳಿಮಾವು ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News