ಮಹಿಳೆಯರ ಭಾವನೆಗಳಿಗೆ ಬೆಲೆ ಸಿಗಲಿ

Update: 2019-03-11 18:30 GMT

ಪುರುಷ ಪ್ರಧಾನ ವ್ಯವಸ್ಥೆಯೊಳಗೂ ಇತ್ತೀಚೆಗೆ ಮಹಿಳೆಯರು ಸ್ವಾವಲಂಬಿಗಳಾಗುತ್ತಿರುವುದು ಸಂತಸದ ವಿಷಯ. ಅಕ್ಷರ ಜ್ಞಾನ ಮಹಿಳೆಯನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದೆ. ಸಂಕೋಚ ಬಿಟ್ಟು ಮಾತನಾಡುವ, ಪ್ರಶ್ನಿಸುವ, ವಿಭಿನ್ನ ಯೋಚನೆಗಳನ್ನು ಮಾಡುವುದರ ಕಡೆಗೆ ಮಹಿಳೆ ಹೊಸ ಹೆಜ್ಜೆ ಇಟ್ಟಿದ್ದಾಳೆ. ಅನ್ಯಾಯವನ್ನು ಗುರುತಿಸಿ ಪ್ರಶ್ನಿಸುವ, ಕೂಲಂಕಶವಾಗಿ ಪರಿಶೀಲಿಸುವ ಜಾಣ್ಮೆಯ ವಾಸ್ತವ ಸ್ಥಿತಿಯು ಅವಳ ಗುರುತು ಮತ್ತು ಅಸ್ಮಿತೆಯನ್ನು ತೋರಿಸುತ್ತದೆ. ಹಳ್ಳಿಗಾಡಿನ ಮಹಿಳೆಯರೂ ಕೂಡಾ ಸಂಘ ಸಂಸ್ಥೆಗಳ ಮಾಹಿತಿಯಿಂದ, ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದರಿಂದ, ಕುಟುಂಬ ನಿರ್ವಹಣೆಯ ಜೊತೆಗೆ, ತಮ್ಮ ಮಕ್ಕಳಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂಬ ಭಾವನೆ ಅವರಲ್ಲಿ ಮೂಡತೊಡಗಿದೆ. ಸಾಕಷ್ಟು ಮಹಿಳೆಯರು ಹಲವಾರು ಗುಂಪುಗಳಿಂದ, ಸಂಘ ಸಂಸ್ಥೆಗಳಿಂದ ಹಣ ಪಡೆದು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.

ಅವಳ ದಿಟ್ಟತನವನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಅವಳ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲದ ರೂಪದಲ್ಲಿ ನೀಡುತ್ತಿದೆ. ಅದಕ್ಕೆ ಪೂರಕವಾಗಿ ಮಹಿಳೆ ವಿಶ್ರಾಂತಿಯನ್ನು ಬದಿಗೊತ್ತಿ ದುಡಿಯುವ ಮಟ್ಟವೂ ಮೀರಿದೆ. ಆದರೆ, ಆಕೆ ಇನ್ನೂ ಕುಟುಂಬದಲ್ಲಿ ಪ್ರಾಧಾನ್ಯತೆ ಪಡೆಯುವ, ಮಹಿಳೆಯರ ಶ್ರಮವನ್ನು ಗೌರವಿಸುವ ಅಥವಾ ಸಹಕರಿಸುವ ಮನಸ್ಥಿತಿಯನ್ನು ಕಳೆದುಕೊಂಡಿರುವುದು ಸಹ ಅಷ್ಟೆ ಸತ್ಯ. ಗತ ಕಾಲದಿಂದ ಮಹಿಳೆಯರ ಪರಿಸ್ಥಿಯನ್ನು ನೋಡಿದಾಗ ಈಗಲೂ ಸಹ ಮಹಿಳೆಯ ಬೌದ್ಧ್ದಿಕ ಮಟ್ಟವನ್ನು ಒಂದು ಸಾಂಪ್ರದಾಯಿಕ ನಂಬಿಕೆಗಳ ಅಡಿಯಲ್ಲೇ ಇಡುವ, ಹಾಗೆಯೇ ಇರಬೇಕೆಂಬ ನಿರ್ಬಂಧ ಹೇರುವ ಪುರುಷ ಪ್ರಧಾನ ವ್ಯವಸ್ಥೆಯ ಪ್ರಯತ್ನ ಕೂಡ ಎಲ್ಲಾ ಕ್ಷೇತ್ರದಲ್ಲಿಯೂ ಬಲವಾಗಿಯೇ ಇದೆ.

 ಇವತ್ತಿನ ಮಹಿಳೆ ಬದಲಾವಣೆಗೆ ತೆರೆದುಕೊಳ್ಳುವುದನ್ನು ನೋಡಿ ಖುಷಿಪಡುವ ಒಂದು ಮುಖವಾದರೆ ಮತ್ತು ಅದೇ ಮಹಿಳೆ ತನ್ನ ಕುಟುಂಬ, ಸಾಲ, ಕೆಲಸಗಳ ಜಂಜಾಟಗಳಲ್ಲಿ ಸಿಲುಕಿ ಅದರಿಂದ ಆಚೆ ಬರಲು ಆಕೆ ಒದ್ದಾಡುವುದನ್ನೂ ನಾವಿಂದು ನೋಡುತ್ತಿದ್ದೇವೆ. ತಾನು ಒಂದು ದಿನ ಮನೆಯಲ್ಲಿ ಇದ್ದರೆ, ನಾಳೆ ಸಾಲ ಕಟ್ಟಲು ಹಣವಿಲ್ಲ ಎಂಬ ಭಯ ಅವಳನ್ನು ಪ್ರತಿದಿನ ಕಾಡುತ್ತಿದೆ. ಯಾಕೆಂದರೆ, ಸಾಲ ಕೊಟ್ಟ ಸಂಸ್ಥೆಗಳು ಕೆಲವು ಮಾನದಂಡಗಳನ್ನು ಒಪ್ಪಿಸಿ ಸಹಿ ಹಾಕಿಸಿಕೊಂಡಿರುತ್ತಾರೆ. ಮಿತಿ ಮೀರಿದರೆ ಬೀದಿಯಲ್ಲಿ ಎಲ್ಲರ ಎದುರು ಮನೆಯ ಗೌರವಕ್ಕೆ ಧಕ್ಕೆ ಬರುತ್ತದೆ ಎಂಬ ಕೊರಗು ಅವಳ ನಿದ್ದೆಗೆಡಿಸುತ್ತಿದೆ. ಇಂದಿಗೂ ದಿಕ್ಕು ಕಾಣದ ಎಷ್ಟೋ ತಾಯಂದಿರು ಹಸುಗೂಸುಗಳನ್ನು, ಕುಟುಂಬವನ್ನು ಅನಾಥ ಮಾಡಿ ಸಾವಿಗೆ ಶರಣಾಗುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಈ ಸಂಕಷ್ಟದಲ್ಲಿ ಸಿಲುಕಿರುವ ಮಹಿಳೆಯರಿಗೆ ಸಮಾಧಾನ ಹೇಳುವ ಮನಸ್ಸುಗಳು ಬೇಕಾಗಿವೆ, ಜೀವನದ ಮಾರ್ಗ ತೋರಿಸುವ ಕೈಗಳು ಕಾಣಬೇಕಾಗಿದೆ.

‘‘ಒಳಿತಿಗಾಗಿ ಸಮತೋಲನ’’ ಎಂಬ ಘೋಷಣೆಯನ್ನು ಸರಕಾರ ಈ ವರ್ಷದ ಮಹಿಳಾ ದಿನಾಚರಣೆಗೆ ಕೊಟ್ಟಿದೆ. ಆದರೆ, ಭಾರತದಂತಹ ದೇಶದಲ್ಲಿ ಯಾವ ಕ್ಷೇತ್ರದಲ್ಲಿ ಸಮತೋಲನವನ್ನು ಕಾಣಲು ಸಾಧ್ಯವಾಗಿದೆ ಎಂಬ ಪ್ರಶ್ನೆ ಕೇವಲ ಪ್ರಶ್ನೆಯಾಗಿಯೆ ಉಳಿದಿದೆ. ಉದಾ: ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿಗಾಗಿ ಎಷ್ಟೊಂದು ಹೋರಾಟ ನಡೆದಿದೆ. ಆದರೂ ಆ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಮತ್ತು ಅವಳಿಗಿರುವ ಸ್ಥಾನಮಾನ ತುಂಬಾ ಕಡಿಮೆ. ಹೆಣ್ಣನ್ನು ಕೇವಲ ಕುಟುಂಬ ಎಂಬ ನಾಲ್ಕು ಗೋಡೆಯೊಳಗೆ ನೋಡಲಿಚ್ಛಿಸುವ ಸಮಾಜದಿಂದಾಗಿ ರಾಜಕೀಯ ಕ್ಷ್ತೇತ್ರವಾಗಲಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಲಿ, ಆರ್ಥಿಕ ಭದ್ರತೆಯನ್ನು ಕಾಣುವ ದೃಷ್ಟಿಯಲ್ಲಾಗಲಿ ಸ್ತ್ರೀಯರಿಗೆ ಆ ಮಟ್ಟಗಿನ ಬೆಂಬಲ, ಪ್ರೋತ್ಸಾಹಗಳು ಭಾರತದಲ್ಲಿ ಇನ್ನೂ ಕೂಡ ಮರೀಚಿಕೆಯಾಗಿದೆ. ಶೀಲ ಮತ್ತು ಪಾತಿವ್ರತ್ಯ ಎಂಬ ಗಂಟುಗಳ ಒಳಗೆ ಮಹಿಳೆ ಬಂದಿಯಾಗಿರುವ ಕಾರಣ, ಹೊಸಿಲು ದಾಟಿ ಬಂದ ಮಹಿಳೆಗೆ ಸಾಕಷ್ಟು ಸ್ಥಾನಮಾನ ಸಿಗುತ್ತಿಲ್ಲ ಎಂದರೆ ತಪ್ಪಾಗಲಾರದು. ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಅಂತಾನೇ ವಿಶೇಷ ಮೀಸಲಾತಿಬೇಕು ಎಂಬ ನಿಲುವಿನಲ್ಲಿ ಹೋರಾಟ ನಡೆಸಿದ್ದರೂ ಈಗ ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರ ತಲೆಯ ಬುದ್ಧಿಯ ಕಡಿವಾಣ ಪುರುಷನ ಕೈಯಲ್ಲಿದೆ.

ಮೀಸಲಾತಿ ಇದೆ ಎಂಬ ಕಾರಣಕ್ಕೆ ತಮ್ಮ ಹೆಂಡತಿ ಅಥವಾ ಸಂಬಂಧಿಕರನ್ನು ಚುನಾವಣೆಯಲ್ಲಿ ಸ್ಪರ್ಧಿಸಿ ಅವಳು ಗೆದ್ದರೂ, ತಾನು ಗೆದ್ದೆ ಎಂಬ ಖುಷಿ ವ್ಯಕ್ತಪಡಿಸುವ ಸ್ವಾತಂತ್ರ ಅವಳಿಗೆ ಸಿಕ್ಕಿಲ್ಲ. ಸಾಮಾನ್ಯರಿರಲಿ, ಉನ್ನತ ವಿದ್ಯಾಭ್ಯಾಸ ಪಡೆದಿರುವ ಹಲವು ವರ್ಷಗಳಿಂದ ಪಾರ್ಲಿಮೆಂಟು, ವಿಧಾನ ಸೌಧ ಎಂಬ ಉನ್ನತ ಸ್ಥಳಗಳಲ್ಲಿ ಸಚಿವೆ ಮತ್ತು ಮಂತ್ರಿಗಿರಿ ಪಡೆದಿರುವ ಮಹಿಳೆಯರು ಕೂಡಾ ತಾವಿರುವ ಸಭೆಯಲ್ಲಿ ಪುರುಷರು, ಅತ್ಯಾಚಾರದ ಬಗ್ಗೆ ವ್ಯಂಗ್ಯವಾಗಿ ಮಾತನಾಡುವಾಗ, ‘‘ಬಾಯಿ ಮುಚ್ಚಿ’’ ಎಂದು ಹೇಳುವ ಧೈರ್ಯ ಮತ್ತು ಸ್ವಂತಿಕೆಯನ್ನು ಕಳೆದುಕೊಂಡಿದ್ದಾರೆ. ಕೇವಲ ಒಬ್ಬ ತೋರಿಕೆಯ ನಾಯಕಿಯಾಗಿ ಮಾತ್ರ ಅವಳು ಉಸಿರಾಡುತ್ತಿದ್ದಾಳೆ ವಿನಃ ಇನ್ನಾವುದೇ ಶಕ್ತಿ ಅವಳಿಗಿಲ್ಲ. ಇದನ್ನು ಅಸಹಾಯತೆ ಎನ್ನಬೇಕೋ? ಪುರುಷ ಪ್ರಧಾನ ವ್ಯವಸ್ಥೆಯ ಶಕ್ತಿ ಎನ್ನಬೇಕೋ ಎಂಬುದನ್ನು ಸರಕಾರ ಕೊಟ್ಟಿರುವ ಘೋಷಣೆಯ ಜೊತೆಯಲ್ಲಿಟ್ಟುಕೊಂಡು ಪರೀಕ್ಷಿಸಬೇಕಾಗಿದೆ. ಯಾಕೆಂದರೆ, ಅಧಿಕಾರ ಇರುವವರ ಸ್ಥಿತಿಯೇ ಹೀಗಿರುವಾಗ ಇನ್ನ್ನು ಕಟ್ಟುಪಾಡುಗಳೊಳಗೆ ಸಿಲುಕಿರುವ ಚುನಾಯಿತ ಮಹಿಳಾ ಪ್ರತಿನಿಧಿಗಳು, ಸಾಮಾನ್ಯ ಮಹಿಳೆಯರ ಸ್ಥಿತಿ ಹೇಗೆ ಇದ್ದೀತು?

‘‘ಉದ್ಯೋಗಂ ಪುರುಷ ಲಕ್ಷಣಂ’’ ಎಂದು ನಂಬಿದ್ದ ಒಂದು ಕಾಲ ಇತ್ತು. ಆದರೆ ಈಗ ಅದನ್ನು ಮಹಿಳೆ ಅದಲು ಬದಲು ಮಾಡಿದ್ದಾಳೆ. ಉನ್ನತ ಶಿಕ್ಷಣ, ಅನುಭವವು ಅವಳ ಯೋಚನೆ ಮತ್ತು ತಿಳುವಳಿಕೆಯನ್ನು ಸಾಕಷ್ಟು ವೃದ್ಧಿಸಿದೆ. ಆಕೆಯಲ್ಲಿ ಜವಾಬ್ದಾರಿಯ ಪರಿಜ್ಞಾನವನ್ನು ಬೆಳೆಸಿದೆ. ಹಾಗಾಗಿ ಸಾಮಾಜಿಕವಾಗಿ ಅವಳ ದುಡಿಮೆ ಮತ್ತು ಸ್ಥೈರ್ಯಕ್ಕೆ ಬೆಲೆಸಿಕ್ಕಿದೆ. ಇಷ್ಟಾದರೂ ಅವಳು ಸಮಗ್ರ ನೆಲೆಯಲ್ಲಿ ತನ್ನ ಗುರುತು ಮತ್ತು ಅಸ್ಮಿತೆಯ ಛಾಪು ಮೂಡಿಸಲು ಇನ್ನೂ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಆಕೆಗಿನ್ನೂ ಕಾಡುತ್ತಿರುವ ಲಿಂಗ ಅಸಮಾನತೆ.
ಇದರಿಂದ ಆಕೆ ಆಚೆ ಬರಬೇಕಾಗಿದೆ. ಈ ಮೂಲಕ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆ ತನ್ನ ಪಾತ್ರವನ್ನು ತಾನೆ ಗಟ್ಟಿಮಾಡಿಕೊಳ್ಳಬೇಕಾದ ಅನಿವಾರ್ಯ ಇದೆ.
ಬದಲಾವಣೆಯ ಕಡೆಗೆ ಹೆಜ್ಜೆ ಇಡಬೇಕೆಂಬ ಆಕೆಯ ಭಾವನೆಗೆ ಇನ್ನಾದರೂ ಬೆಲೆ ಸಿಗಬೇಕಾಗಿದೆ.

Writer - ಮಂಗಳ ಎಸ್., ಹಾದನೂರು

contributor

Editor - ಮಂಗಳ ಎಸ್., ಹಾದನೂರು

contributor

Similar News