ಮೊದಲ ಟ್ವೀಟ್‌ನಲ್ಲೇ ಗಮನಸೆಳೆದ ಪ್ರಿಯಾಂಕಾ ಗಾಂಧಿ

Update: 2019-03-13 04:33 GMT

ಹೊಸದಿಲ್ಲಿ, ಮಾ.13: ಟ್ವಿಟರ್ ಖಾತೆ ತೆರೆದು ಒಂದು ತಿಂಗಳ ಬಳಿಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಂಗಳವಾರ ಸಂಜೆ ಮಹಾತ್ಮ ಗಾಂಧೀಜಿ ಮತ್ತು ಅವರ ಅಹಿಂಸಾ ತತ್ವವನ್ನು ಉಲ್ಲೇಖಿಸಿ ಮೊಟ್ಟಮೊದಲ ಟ್ವೀಟ್ ಮಾಡಿದ್ದಾರೆ. "ಸಾಬರಮತಿಯ ಸರಳ ಘನತೆಯಲ್ಲಿ, ಸತ್ಯ ಜೀವಂತವಾಗಿದೆ" ಎಂದು ಇವರು ಮಾಡಿರುವ ಟ್ವೀಟ್‌ಗೆ 10 ಸಾವಿರ ಲೈಕ್ ಬಂದಿದೆ. 3,000 ಮಂದಿ ಇದನ್ನು ಮರುಟ್ವೀಟ್ ಮಾಡಿದ್ದಾರೆ.

ಕೆಲವೇ ಕ್ಷಣದಲ್ಲಿ ಮಾಡಿದ ಮುಂದಿನ ಟ್ವೀಟ್‌ನಲ್ಲಿ ಮಹಾತ್ಮ ಗಾಂಧೀಜಿಯವರ ಸಾಬರಮತಿ ಆಶ್ರಮದ ಚಿತ್ರವನ್ನೂ ಸೇರಿಸಿ ರಾಷ್ಟ್ರಪಿತನ ಘೋಷಣೆಯೊಂದನ್ನು ಉಲ್ಲೇಖಿಸಿದ್ದಾರೆ. "ಹಿಂಸೆಗೆ ನನ್ನ ಆಕ್ಷೇಪವಿದೆ ಏಕೆಂದರೆ, ಇದು ಒಳ್ಳೆಯದರಂತೆ ಕಾಣಬಹುದು; ಆದರೆ ಈ ಒಳ್ಳೆಯ ಅಂಶ ತಾತ್ಕಾಲಿಕ. ಆದರೆ ಇದರಿಂದಾಗುವ ದುಷ್ಟತೆ ಖಾಯಂ ಆಗಿ ಇರುತ್ತದೆ" ಎಂದು ಹೇಳಿದ್ದಾರೆ.

ಎರಡನೇ ಟ್ವೀಟ್‌ಗೆ ಕೂಡಾ ಭಾರಿ ಸ್ಪಂದನೆ ಸಿಕ್ಕಿದ್ದು, 8.000 ಮಂದಿ ಲೈಕ್ ಮಾಡಿ, 1,000 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 11ರಂದು ಟ್ವಿಟರ್ ಸೇರಿದ್ದ ಪ್ರಿಯಾಂಕಾ ಗಾಂಧಿ, ಕೇವಲ 10 ಗಂಟೆಗಳಲ್ಲಿ ಒಂದು ಲಕ್ಷ ಅನುಯಾಯಿಗಳನ್ನು ಗಳಿಸಿದ್ದರು. ಸದ್ಯ ಈ ಸಾಮಾಜಿಕ ಜಾಲತಾಣಧಲ್ಲಿ ಅವರು ಎರಡು ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News