​ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಮಹಿಳೆಯರಿಗೆ ಉದ್ಯೋಗದಲ್ಲಿ ಶೇ. 33 ಮೀಸಲಾತಿ: ರಾಹುಲ್ ಗಾಂಧಿ

Update: 2019-03-14 03:21 GMT

ಚೆನ್ನೈ, ಮಾ. 14: ದಕ್ಷಿಣ ಭಾರತದಲ್ಲಿ ಯುಪಿಎ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಎಲ್ಲ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡಲಾಗುವುದು ಎಂದು ಘೋಷಿಸಿದ್ದಾರೆ.

"ಕಾಂಗ್ರೆಸ್ ಪಕ್ಷ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರದ ಸೂತ್ರ ಹಿಡಿದ ಬಳಿಕ ಹೊರಡಿಸುವ ಮೊಟ್ಟಮೊದಲ ಆದೇಶ ಇದಾಗಿರುತ್ತದೆ" ಎಂದು ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಅವರು ತಿಳಿಸಿದರು.

ಡಿಎಂಕೆ ಮುಖಂಡ ಎಂ.ಕೆ.ಸ್ವಾಲಿನ್ ಕೂಡಾ ಜತೆಗಿದ್ದರು. ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ಮಸೂದೆಯನ್ನು ಕಾರ್ಯಗತಗೊಳಿಸುವುದಾಗಿಯೂ ಅವರು ಭರವಸೆ ನೀಡಿದರು.

ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಚುನಾವಣಾ ಮೈತ್ರಿ ಮಾಡಿಕೊಳ್ಳಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

"ಬಿಜೆಪಿಗೆ ಮಾತ್ರ ಯಾವುದೇ ಮೈತ್ರಿ ಇಲ್ಲ" ಎಂದ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಹೊಸ ಸರ್ಕಾರ ರಫೇಲ್ ಯುದ್ಧವಿಮಾನಗಳ ಖರೀದಿಯ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News