ಜೊಕೊವಿಕ್ ಪರಾಭವ, ನಡಾಲ್, ಫೆಡರರ್‌ಗೆ ಮುನ್ನಡೆ

Update: 2019-03-14 03:29 GMT

ಇಂಡಿಯನ್ ವೆಲ್ಸ್, ಮಾ.13: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್, ವಿಶ್ವದ ನಂ.1 ಆಟಗಾರ ಸರ್ಬಿಯದ ನೊವಾಕ್ ಜೊಕೊವಿಕ್‌ಗೆ 6-4, 6-4 ಸೆಟ್‌ಗಳಿಂದ ಆಘಾತ ನೀಡಿದ ಜರ್ಮನಿಯ ಫಿಲಿಪ್ ಕೋಲ್‌ಸ್ಕ್ರೆಬರ್ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಜೊಕೊವಿಕ್ ವಿರುದ್ಧ ಫಿಲಿಪ್ ಗೆಲುವು ಕಂಡಿದ್ದಾರೆ.

ಈ ಮೊದಲು ಫಿಲಿಪ್ ವಿರುದ್ಧದ 9 ಪಂದ್ಯಗಳಲ್ಲಿ ಎಂಟು ಪಂದ್ಯಗಳನ್ನು ಜಯಿಸಿದ್ದ ಜೊಕೊವಿಕ್ ಈ ಪಂದ್ಯದಲ್ಲಿ 39ನೇ ರ್ಯಾಂಕಿನ ಆಟಗಾರನ ವಿರುದ್ಧ ನಿರುತ್ತರರಾದರು. ಪ್ರಥಮ ಸೆಟನ್ನು ಕಳೆದುಕೊಂಡ ಬಳಿಕ ಹತಾಶರಾದ ಜೊಕೊ ರಾಕೆಟ್‌ನ್ನು ನೆಲಕ್ಕೆ ಕುಕ್ಕಿದರು. ಆದರೆ ಎರಡನೇ ಸೆಟ್‌ನಲ್ಲೂ ಅವರಿಗೆ ಅದೃಷ್ಟ ಖುಲಾಯಿಸಲಿಲ್ಲ.

ಪಂದ್ಯದಲ್ಲಿ ಮುಂಗೈ ಹೊಡೆತಗಳ ಮೂಲಕ ರಂಜಿಸಿದ ಫಿಲಿಪ್ ಅಂತಿಮವಾಗಿ ಜಯದ ನಗೆ ಬೀರಿದರು. ಕ್ವಾರ್ಟರ್‌ಫೈನಲ್‌ನಲ್ಲಿ ಸ್ಥಾನ ಪಡೆಯಲು ಫ್ರಾನ್ಸ್‌ನಗೇಲ್ ಮೊಂಫಿಲ್ಸ್ ಅವರನ್ನು ಫಿಲಿಪ್ ಎದುರಿಸಲಿದ್ದಾರೆ.

ಇನ್ನೊಂದೆಡೆ ಸ್ಪೇನ್‌ನ ದೈತ್ಯ ಆಟಗಾರ ರಫೆಲ್ ನಡಾಲ್ ಅರ್ಜೆಂಟೀನದ ಡಿಯಾಗೊ ಸ್ಕ್ವಾಟ್ಝಮನ್‌ರನ್ನು 6-3, 6-3 ಸೆಟ್‌ಗಳಿಂದ ಮಣಿಸಿ ಅಂತಿಮ 16ರ ಹಂತಕ್ಕೆ ಪ್ರವೇಶ ಪಡೆದರು.

 ಇಂಡಿಯನ್ ವೆಲ್ಸ್‌ನಲ್ಲಿ ಮೂರು ಬಾರಿ ಚಾಂಪಿಯನ್‌ಪಟ್ಟ ಧರಿಸಿರುವ ನಡಾಲ್ ತಮ್ಮ ಮುಂದಿನ ಪಂದ್ಯದಲ್ಲಿ ಸರ್ಬಿಯದ ಕ್ವಾಲಿಫೈಯರ್ ಆಟಗಾರ ಫಿಲಿಪ್ ಕ್ರಾಜಿನೊವಿಕ್‌ರನ್ನು ಎದುರಿಸಲಿದ್ದಾರೆ.

ಮತ್ತೊಂದೆಡೆ ನಾಲ್ಕನೇ ಶ್ರೇಯಾಂಕದ ಸ್ವಿಸ್‌ನ ರೋಜರ್ ಫೆಡರರ್ ಅವರು 6-3, 6-4 ಸೆಟ್‌ಗಳಿಂದ ಸ್ವಿಸ್‌ನವರೇ ಆದ ಸ್ಟಾನ್ ವಾವ್ರಿಂಕಾ ಅವರನ್ನು ಪರಾಭವಗೊಳಿಸಿದರು. ತಮ್ಮ ಮುಂದಿನ ಪಂದದಲ್ಲಿ ಅವರು ಬ್ರಿಟನ್‌ನಕೈಲ್ ಎಡ್ಮಂಡ್‌ರನ್ನು ಎದುರಿಸಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News