ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಕ್ಸಿ ಬಗ್ಗೆ ಭಯ : ರಾಹುಲ್ ಗಾಂಧಿ

Update: 2019-03-14 07:49 GMT

ಹೊಸದಿಲ್ಲಿ, ಮಾ. 14 : ಪುಲ್ವಾಮ ದಾಳಿಯ ರೂವಾರಿ, ಜೈಷ್ ಎ ಮೊಹಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ನನ್ನು ಜಾಗತಿಕ ಭಯೋತ್ಪಾಕ ಎಂದು ಘೋಷಿಸುವ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ಚೀನಾ ಅಡ್ಡಗಾಲಿಕ್ಕಿರುವುದು ಬಗ್ಗೆ ಕಾಂಗ್ರೆಸ್ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ ''ದುರ್ಬಲ ಮೋದಿ ಕ್ಸಿ ಬಗ್ಗೆ ಭಯ ಹೊಂದಿದ್ದಾರೆ. ಚೀನಾ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯಾಚರಿಸಿದರೂ ಅವರ ಬಾಯಿಯಿಂದ ಒಂದೇ ಒಂದು ಮಾತು ಬರುವುದಿಲ್ಲ. ನೋಮೋ ಚೀನಾ ರಾಜತಾಂತ್ರಿಕತೆ - ಗುಜರಾತ್ ನಲ್ಲಿ ಕ್ಸಿ ಜತೆ ಉಯ್ಯಾಲೆಯಲ್ಲಿ ತೂಗುವುದು, ದಿಲ್ಲಿಯಲ್ಲಿ ಕ್ಸಿಯನ್ನು ಆಲಂಗಿಸುವುದು ಹಾಗೂ ಚೀನಾದಲ್ಲಿ ಕ್ಸಿ ಎದುರು ತಲೆ ಬಗ್ಗಿಸುವುದು''  ಎಂದು ಬಣ್ಣಿಸಿದ್ದಾರೆ.

ಪಾಕಿಸ್ತಾನದ ಮಿತ್ರ ದೇಶವಾಗಿರುವ ಚೀನಾ ವಿಶ್ವಸಂಸ್ಥೆಯಿಂದ 2001ರಲ್ಲಿಯೇ ನಿಷೇಧಕ್ಕೊಳಗಾಗಿದ್ದ ಜೈಷ್-ಎ-ಮೊಹಮದ್ ಸಂಘಟನೆಯ ಮಸೂದ್ ಅಝರ್ ನ ಸಹಾಯಕ್ಕೆ ನಿಂತಿರುವುದು ಇದು ಕಳೆದ ದಶಕದಲ್ಲಿ ನಾಲ್ಕನೇ ಬಾರಿಯಾಗಿದೆ. 1999ರಲ್ಲಿ ಭಾರತೀಯ ವಿಮಾನವನ್ನು ಕಂದಹಾರ್ ಗೆ ಅಪಹರಿಸಿದ ನಂತರ ಮಸೂದ್ ಅಝರ್ ನನ್ನು ಬಿಡುಗಡೆಗೊಳಿಸಿದ್ದು ಇನ್ನೊಂದು ಬಿಜೆಪಿ ನೇತೃತ್ವದ ಸರಕಾರವೆಂದು ಪುಲ್ವಾಮ ದಾಳಿಯ ನಂತರ ಕಾಂಗ್ರೆಸ್ ನೆನಪಿಸುತ್ತಾ ಇದೆ ಎಂದಿದ್ದಾರೆ.

ಮಸೂದ್ ಅಝರ್ ನ ಮೇಲೆ ನಿಷೇಧ ಹೇರಲು 2016ರಲ್ಲಿ ಚೀನಾ ಅಡ್ಡಗಾಲಿಕ್ಕಿದ ನಂತರವೂ ಚೀನಾ ಅಧ್ಯಕ್ಷ ಕ್ಸಿ ಜನ್ಪಿಂಗ್ ಗೆ ಭಾರತಕ್ಕೆ ಆಹ್ವಾನ ನೀಡಿ ನಂತರ ವುಹಾನ್ ನಲ್ಲೂ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಮೋದಿ ಟೀಕೆಗೊಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News