ಮಹಿಳೆಗೆ 202 ಕೋಟಿ ರೂ. ಪರಿಹಾರ ನೀಡುವಂತೆ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಗೆ ಆದೇಶ

Update: 2019-03-14 10:29 GMT

ನ್ಯೂಯಾರ್ಕ್ : ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಟಾಲ್ಕಂ ಪೌಡರಿನಲ್ಲಿರುವ ಅಸ್ಬೆಸ್ಟೋಸ್ ಅಂಶದಿಂದ ತನಗೆ ಕ್ಯಾನ್ಸರ್ ಕಾಯಿಲೆ ತಗುಲಿದೆ ಎಂದು ಆರೋಪಿಸಿ ಕಂಪೆನಿಯಿಂದ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದ ಮಹಿಳೆಗೆ 29 ಮಿಲಿಯನ್ ಡಾಲರ್ (202 ಕೋಟಿ ರೂ.) ಪರಿಹಾರ ನೀಡುವಂತೆ ಅಮೆರಿಕಾದ ನ್ಯಾಯಾಲಯವೊಂದು ಕಂಪೆನಿಗೆ ಆದೇಶಿಸಿದೆ.

ಕಂಪೆನಿಯ ಉತ್ಪನ್ನಗಳನ್ನು ಉಪಯೋಗಿಸಿ ತಮಗೆ ಆರೋಗ್ಯ ಸಮಸ್ಯೆಗಳುಂಟಾಗಿವೆ ಎಂದು  ಮಹಿಳೆಯರು ದೂರು ನೀಡಿರುವ  13,000 ಕ್ಕೂ ಅಧಿಕ ಪ್ರಕರಣಗಳು ಅಮೆರಿಕಾದಲ್ಲಿ ಬಾಕಿಯಿವೆ.

ಈ ಲೇಟೆಸ್ಟ್ ಕೋರ್ಟ್ ಆದೇಶದ ವಿರುದ್ಧ ತಾನು ಅಪೀಲು ಸಲ್ಲಿಸುವುದಾಗಿ ಕಂಪೆನಿ ಹೇಳಿದೆಯಲ್ಲದೆ ವಿಚಾರಣೆಯಲ್ಲಿ ಹಲವಾರು  ದೋಷಗಳಿವೆ ಎಂದು ದೂರಿದೆ. ''ನಾವು ಕಾನೂನು ಪ್ರಕ್ರಿಯೆಯನ್ನು ಗೌರವಿಸುತ್ತೇವೆಯಾದರೂ  ನ್ಯಾಯಾಲಯದ ತೀರ್ಪು ಒಂದು ಉತ್ಪನ್ನದ ಬಗ್ಗೆ ವೈದ್ಯಕೀಯ, ವೈಜ್ಞಾನಿಕ  ತೀರ್ಮಾನವಾಗದು'' ಎಂದು ಕಂಪೆನಿ ಹೇಳಿಕೊಂಡಿದೆ.

ಈ ನಿರ್ದಿಷ್ಟ ಪ್ರಕರಣದ ದೂರುದಾರೆ ಟೆರ್ರಿ ಲೀವಿಟ್ಟ್ ತಾನು ಕಂಪೆನಿಯ ಬೇಬಿ ಪೌಡರ್ ಹಾಗೂ ಶವರ್ ಟು ಶವರ್ ಉತ್ಪನ್ನಗಳನ್ನು 1960 ಹಾಗೂ 1970ರಲ್ಲಿ ಉಪಯೋಗಿಸಿದ್ದಾಗಿ ಹಾಗೂ 2017ರಲ್ಲಿ ಮೆಸೊಥೆಲಿಯೋಮಾ ಕಾಯಿಲೆಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.

ಇಂತಹುದೇ ಇನ್ನೊಂದು ಪ್ರಕರಣದಲ್ಲಿ ಕಂಪೆನಿಯ ಟಾಲ್ಕ್ ಉತ್ಪನ್ನಗಳನ್ನು ಬಳಸಿದ ನಂತರ ಅಂಡಾಶಯದ ಕ್ಯಾನ್ಸರ್ ಉಂಟಾಗಿತ್ತು ಎಂದು ದೂರಿದ್ದ  22 ಮಹಿಳೆಯರಿಗೆ 4.7 ಬಿಲಿಯನ್ ಡಾಲರ್ (32.169 ಕೋಟಿ ರೂ.) ಪರಿಹಾರ ನೀಡುವಂತೆ ಮಿಸ್ಸೋರಿ ನ್ಯಾಯಾಲಯ 2018ರ ಜುಲೈ ಯಲ್ಲಿ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News