ಅಗ್ರ 10ರಲ್ಲಿ ಸ್ಥಾನ ಪಡೆದ ವಿರಾಟ್ ಕೊಹ್ಲಿ

Update: 2019-03-14 18:12 GMT

►ಪ್ರಥಮ ಸ್ಥಾನದಲ್ಲಿ ರೊನಾಲ್ಡೊ

►ಧೋನಿಗೆ 13ನೇ ಸ್ಥಾನ

ಬ್ರಿಸ್ಟಲ್(ಇಂಗ್ಲೆಂಡ್), ಮಾ.14: ಇಎಸ್‌ಪಿಎನ್ ಕ್ರೀಡಾ ವೆಬ್‌ಸೈಟ್ ಗುರುವಾರ ವಿಶ್ವದ ಅಗ್ರ 100 ಅಥ್ಲೀಟ್‌ಗಳ ವಾರ್ಷಿಕ ಪಟ್ಟಿ ಬಿಡುಗಡೆ ಮಾಡಿದ್ದು ಪೋರ್ಚುಗಲ್ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊಗೆ ಅಗ್ರ ಪಟ್ಟ ನೀಡಲಾಗಿದೆ. ಎರಡನೇ ಸ್ಥಾನದಲ್ಲಿ ಮಾಜಿ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರೊನ್ ಜೇಮ್ಸ್ ಹಾಗೂ ಮೂರನೇ ಸ್ಥಾನದಲ್ಲಿ ಅರ್ಜೆಂಟೀನ ಫುಟ್ಬಾಲ್ ಮೋಡಿಗಾರ ಲಿಯೊನೆಲ್ ಮೆಸ್ಸಿ ಇದ್ದಾರೆ.

ಭಾರತದ ಅಥ್ಲೀಟ್‌ಗಳ ಪೈಕಿ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರ 10ರಲ್ಲಿ (7ನೇ) ಸ್ಥಾನ ಗಳಿಸಿದ ಏಕೈಕ ಆಟಗಾರನಾಗಿದ್ದಾರೆ. ಕಳೆದ ವರ್ಷದ ಪಟ್ಟಿಯಲ್ಲಿ ಕೊಹ್ಲಿ 11ನೇ ಸ್ಥಾನದಲ್ಲಿದ್ದರು. ಒಟ್ಟು 8 ಮಂದಿ ಭಾರತದ ಕ್ರಿಕೆಟಿಗರು ಸದ್ಯದ ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಕಂಡುಕೊಂಡಿದ್ದು ಮಾಜಿ ನಾಯಕ ಎಂ.ಎಸ್.ಧೋನಿ(13) ಅವರಲ್ಲೊಬ್ಬರಾಗಿದ್ದಾರೆ.

ಅಗ್ರ 100ರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಪುರುಷರ ಪೈಕಿ ಎಲ್ಲರೂ ಕ್ರಿಕೆಟಿಗರೇ ಆಗಿರುವುದು ವಿಶೇಷ. ಯುವರಾಜ್ ಸಿಂಗ್ (18), ಸುರೇಶ್ ರೈನಾ (22), ಆರ್. ಅಶ್ವಿನ್ (42), ರೋಹಿತ್ ಶರ್ಮಾ (46), ಹರ್ಭಜನ್ ಸಿಂಗ್ (74) ಮತ್ತು ಶಿಖರ್ ಧವನ್ (94) ವಿಶ್ವ ಪ್ರಸಿದ್ಧರ ಪಟ್ಟಿಯಲ್ಲಿ ಸ್ಥಾನ ಪಡೆದವರು.

►ಆಯ್ಕೆ ಹೇಗೆ?: ಈ ಪಟ್ಟಿಯನ್ನು ಪ್ರಮುಖವಾಗಿ ಮೂರು ಅಂಶಗಳನ್ನು ಗಮನಿಸಿ ಸಿದ್ಧಪಡಿಸಲಾಗುತ್ತದೆ. ಅವುಗಳೆಂದರೆ 1. ಆನ್‌ಲೈನ್‌ನಲ್ಲಿ ಅತೀ ಹೆಚ್ಚು ಹುಡುಕಾಟಕ್ಕೆ ಒಳಗಾದವರು. 2.ಜನರ ಬೆಂಬಲ 3. ಸಾಮಾಜಿಕ ಅನುಸರಿಸುವಿಕೆ (ಸೋಷಿಯಲ್ ಫಾಲೊವಿಂಗ್). ಈ ಪಟ್ಟಿಯಲ್ಲಿ ವಿಶ್ವದ ಮೂವರೇ ಮಹಿಳೆಯರು ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಸೆರೆನಾ ವಿಲಿಯಮ್ಸ್ (17), ಮರಿಯ ಶರಪೋವಾ (37) ಹಾಗೂ ಸಾನಿಯಾ ಮಿರ್ಝಾ (93). ಭಾರತದಿಂದ ಸ್ಥಾನ ಪಡೆದ ಏಕೈಕ ಮಹಿಳಾ ಅಥ್ಲೀಟ್ ಆಗಿದ್ದಾರೆ ಸಾನಿಯಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News