"ದಿ ವರ್ಲ್ಡ್ಸ್ ಬೆಸ್ಟ್" ಸ್ಪರ್ಧೆ ಗೆದ್ದ ಚೆನ್ನೈಯ ಬಾಲಕ

Update: 2019-03-15 03:37 GMT

ಚೆನ್ನೈ, ಮಾ. 15: ಕೀಬೋರ್ಡ್‌ನಲ್ಲಿ ಈ 13ರ ಪೋರನ ಪುಟ್ಟ ಕೈ ಪಾದರಸದಂತೆ ಹರಿದಾಡುತ್ತಿದ್ದುದನ್ನು ನೋಡಿದಾಗಲೇ, ಲಿಡಿಯನ್ ನಾದಸ್ವರಂ, "ವಿಶ್ವದ ಅತ್ಯುತ್ತಮ ಜಾಗತಿಕ ಪ್ರತಿಭೆ ಸ್ಪರ್ಧೆ" ಗೆಲ್ಲುವ ಹಾಟ್ ಫೇವರಿಟ್ ಎನಿಸಿದ್ದ. ಗುರುವಾರ ಆ ನಿರೀಕ್ಷೆ ಕೈಗೂಡಿದೆ. 

ಸ್ಪರ್ಧೆಯಲ್ಲಿ ಲಿಡಿಯನ್ ವಿಜೇತ ಎಂದು ಘೋಷಿಸಲಾಗಿದ್ದು, ಈ ಅಪೂರ್ವ ಪ್ರತಿಭೆ 10 ಲಕ್ಷ ಡಾಲರ್ ಬಹುಮಾನದೊಂದಿಗೆ ತಾಯ್ನಿಡಿಗೆ ಕೀರ್ತಿ ತಂದಿದ್ದಾನೆ.

ಎ.ಆರ್.ರಹಮಾನ್ ಗರಡಿಯಲ್ಲಿ ಪಳಗಿದ ಈ ಯುವಪ್ರತಿಭೆ, ನಾಲ್ಕು ವರ್ಷಗಳ ಕಾಲ ಕೆಎಂ ಮ್ಯೂಸಿಕ್ ಕನ್ಸರ್ವೇಟರಿಯಲ್ಲಿ ತರಬೇತಿ ಪಡೆದಿದ್ದ. ಇದೀಗ ತಂದೆ ವರ್ಷನ್ ಸತೀಶ್ ಅವರಿಂದ ತರಬೇತಿ ಪಡೆಯುತ್ತಿದ್ದು, ನಿಮಿಷಕ್ಕೆ 280 ಬೀಟ್ ನುಡಿಸುವ ಮೂಲಕ ತೀರ್ಪುಗಾರರಿಗೆ ಅಚ್ಚರಿ ಮೂಡಿಸಿದ್ದಾನೆ. ನೋಡನೋಡುತ್ತಿದ್ದಂತೆಯೇ ಈತ ಬೀಟ್ ವೇಗವನ್ನು ನಿಮಿಷಕ್ಕೆ 325 ಬೀಟ್‌ಗೆ ಹೆಚ್ಚಿಸಿದ.

ಶೋ ನಿರೂಪಕ ಜೇಮ್ಸ್ ಕೋರ್ಡೆನ್ ಬಾಲಕನ ಬಗ್ಗೆ ಟ್ವೀಟ್ ಮಾಡಿ, "ನಿಜವಾಗಿಯೂ ನಾನು ನನ್ನ ಜೀವನದಲ್ಲಿ ಕಂಡ ಅತ್ಯದ್ಭುತ" ಎಂದು ಹೊಗಳಿದ್ದಾರೆ. ದಿ ವರ್ಲ್ಡ್ಸ್ ಬೆಸ್ಟ್ ಸ್ಪರ್ಧೆಯ ಬಳಿಕ ಲಿಡಿಯನ್ ಎಲೆನ್ ಡೆಜೆನೆರಸ್ ಕಾರ್ಯಕ್ರಮದಲ್ಲಿ ಕೂಡಾ ಕಳೆದ ವಾರ ಕಾಣಿಸಿಕೊಂಡಿದ್ದ.

ತಂದೆ ಹಾಗೂ ಸಂಗೀತ ನಿರ್ದೇಶಕ ವರ್ಷನ್ ಸತೀಶ್ ಮಾರ್ಗದರ್ಶನದಲ್ಲಿ ದಿನಕ್ಕೆ ಆರು ಗಂಟೆ ಸತತ ಅಭ್ಯಾಸ ನಡೆಸುತ್ತಿರುವುದಾಗಿ ಬಾಲಕ ಹೇಳಿದ್ದಾನೆ. "ನಾನು ಯೂಟ್ಯೂಬ್‌ನಲ್ಲಿ ಸಂಗೀತ ಆಲಿಸಿ, ಮ್ಯೂಸಿಕ್ ಸಾಫ್ಟ್‌ವೇರ್‌ಗಳ ಬಗ್ಗೆ ತಿಳಿದುಕೊಳ್ಳಲೂ ಸಮಯ ವಿನಿಯೋಗಿಸುತ್ತಿದ್ದೇನೆ. ನಾನು ಬಹಳಷ್ಟು ಪ್ರಯೋಗ ನಡೆಸುತ್ತಿದ್ದೇನೆ ಹಾಗೂ ನಮ್ಮದೇ ಸಂಗೀತವನ್ನು ನಾವು ಸಂಯೋಜಿಸುತ್ತೇವೆ" ಇದೀಗ ಮಿಕ್ಸಿಂಗ್, ಸೌಂಡ್‌ಸಿಸ್ಟಂನಂಥ ಕೌಶಲಗಳನ್ನೂ ಅಭ್ಯಸಿಸುತ್ತಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News