ಲೋಕಸಭೆ ಚುಣಾವಣೆಗೆ ಸ್ಪರ್ಧಿಸಲು ಸೆಹ್ವಾಗ್ ನಕಾರ

Update: 2019-03-15 05:09 GMT

ಹೊಸದಿಲ್ಲಿ, ಮಾ. 15: ಬಿಜೆಪಿ ಟಿಕೆಟ್‌ನಿಂದ ಲೋಕಸಭೆ ಚುಣಾವಣೆಗೆ ಸ್ಪರ್ಧಿಸಲು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇದರಿಂದ ಸೆಹ್ವಾಗ್ ಅವರನ್ನು ಕಣಕ್ಕೆ ಇಳಿಸುವ ಬಿಜೆಪಿ ಪ್ರಯತ್ನಕ್ಕೆ ತೀವ್ರ ಹಿನ್ನಡೆಯಾಗಿದೆ.

ಸೆಹ್ವಾಗ್ ಅವರಿಗೆ ದೆಹಲಿಯಿಂದ ಟಿಕೆಟ್ ನೀಡಲು ಪಕ್ಷ ಮುಂದಾಗಿತ್ತು. ಆದರೆ ಸ್ಪರ್ಧೆಗೆ ಸೆಹ್ವಾಗ್ ನಿರಾಕರಿಸಿದರು. ಮತ್ತೊಬ್ಬ ಕ್ರಿಕೆಟರ್ ಗೌತಮ್ ಗಂಭೀರ್ ರಾಜಕೀಯ ಪ್ರವೇಶ ಮಾಡುವುದು ಖಚಿತವಾಗಿದ್ದು, ದೆಹಲಿಯ ಒಂದು ಕ್ಷೇತ್ರದಿಂದ ಅವರು ಸ್ಪರ್ಧಿಸಲಿದ್ದಾರೆ ಎಂದು ದೆಹಲಿ ಬಿಜೆಪಿಯ ಹಿರಿಯ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಸೆಹ್ವಾಗ್ ಅವರನ್ನು ದೆಹಲಿ ಪಶ್ಚಿಮ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿತ್ತು. ಆದರೆ ವೈಯಕ್ತಿಕ ಕಾರಣ ನೀಡಿ ಸೆಹ್ವಾಗ್ ಸ್ಪರ್ಧೆ ಮಾಡಲು ನಿರಾಕರಿಸಿದರು. "ನನಗೆ ರಾಜಕೀಯದಲ್ಲಿ ಆಸಕ್ತಿಯೂ ಇಲ್ಲ; ನಾನು ಚುನಾವಣೆಗೆ ಸ್ಪರ್ಧಿಸುವುದೂ ಇಲ್ಲ" ಎಂದು ಹಿರಿಯ ಕ್ರಿಕೆಟಿಗ ಸ್ಪಷ್ಟಪಡಿಸಿದರು ಎಂದು ಅವರು ಬಹಿರಂಗಪಡಿಸಿದ್ದಾರೆ.

ಪ್ರಸ್ತುತ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಸೆಹ್ವಾಗ್ ಅವರು ಹರ್ಯಾಣದ ರೋಹ್ಟಕ್ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಾರೆ ಎಂಬ ವದಂತಿ ಕೆಲ ದಿನಗಳ ಹಿಂದೆ ದಟ್ಟವಾಗಿ ಹಬ್ಬಿತ್ತು. ಆದರೆ ಇದಕ್ಕೆ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ ಸೆಹ್ವಾಗ್, "ಈ ವದಂತಿಯಂತೆ ಕೆಲ ವಿಚಾರಗಳು ಎಂದಿಗೂ ಬದಲಾಗುವುದಿಲ್ಲ. 2014ರಲ್ಲೂ ಇದೇ ವದಂತಿ; 2019ರ ವದಂತಿಯಲ್ಲೂ ಹೊಸತನವೇನೂ ಇಲ್ಲ. ಅಂದೂ ಆಸಕ್ತಿ ಇರಲಿಲ್ಲ; ಇಂದೂ ಆಸಕ್ತಿ ಇಲ್ಲ; ಬಾತ್ ಖತಂ, 5 ಈಯರ್ಸ್‌ ಚಾಲೆಂಜ್" ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News