ಹೆಸರು ಬಹಿರಂಗಗೊಳಿಸಿದ್ದಕ್ಕಾಗಿ ಸಂತ್ರಸ್ತೆಗೆ 25 ಲ.ರೂ.ನೀಡುವಂತೆ ಸರಕಾರಕ್ಕೆ ಆದೇಶ

Update: 2019-03-15 17:50 GMT

ಚೆನ್ನೈ,ಮಾ.15: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತುಗಳನ್ನು ಸರಕಾರಿ ಅಧಿಕಾರಿಗಳು ಬಹಿರಂಗಗೊಳಿಸುವ ಭವಿಷ್ಯದ ಘಟನೆಗಳನ್ನು ತಡೆಯುವ ಪ್ರಯತ್ನವಾಗಿ ಮದ್ರಾಸ್ ಉಚ್ಚ ನ್ಯಾಯಾಲಯದ ಮದುರೈ ಪೀಠವು ಪೊಲ್ಲಾಚಿ ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯ ಖಾಸಗಿತನ,ಘನತೆ ಮತ್ತು ವ್ಯಕ್ತಿತ್ವಕ್ಕೆ ಚ್ಯುತಿಯನ್ನುಂಟು ಮಾಡಿದ್ದಕ್ಕಾಗಿ ಆಕೆಗೆ 25 ಲ.ರೂ.ಗಳ ಮಧ್ಯಂತರ ಪರಿಹಾರವನ್ನು ಪಾವತಿಸುವಂತೆ ಶುಕ್ರವಾರ ತಮಿಳುನಾಡು ಸರಕಾರಕ್ಕೆ ಆದೇಶಿಸಿದೆ.

ತನಿಖೆಯ ಮೊದಲ ಹಂತದಲ್ಲಿಯೇ ತಾನು ಸ್ವೀಕರಿಸಿದ್ದ ವೀಡಿಯೊಗಳ ಒಟ್ಟು ಸಂಖ್ಯೆ ಮತ್ತು ಆರೋಪಿಗಳ ಸಂಖ್ಯೆಯನ್ನು ಬಹಿರಂಗಗೊಳಿಸಿದ್ದಕ್ಕಾಗಿ ಕೊಯಿಮತ್ತೂರು ಎಸ್.ಪಿ.ಆರ್.ಪಾಂಡ್ಯರಾಜನ್ ಅವರನ್ನು ತೀವ್ರ ತರಾಟೆಗೆತ್ತಿಕೊಂಡ ಪೀಠವು,ಪೊಲೀಸ್ ಅಧಿಕಾರಿಯ ಹೊಣೆಗೇಡಿತನದ ನಡತೆಯನ್ನು ಈ ನ್ಯಾಯಾಲಯವು ಅತ್ಯಂತ ತೀಕ್ಷ್ಣವಾಗಿ ಖಂಡಿಸುತ್ತದೆ ಮತ್ತು ಸದ್ರಿ ಅಧಿಕಾರಿಯ ವಿರುದ್ಧ ಶಿಸ್ತುಕ್ರಮವನ್ನು ಜರುಗಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡುತ್ತಿದೆ ಎಂದು ಹೇಳಿತು.

ಎಸ್‌ಪಿ ಮಾತ್ರ ಸಂತ್ರಸ್ತೆಯ ಹೆಸರನ್ನು ಬಹಿರಂಗೊಗೊಳಿಸಿದ್ದಲ್ಲ,ಸರಕಾರವೂ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ತನ್ನ ಆದೇಶದಲ್ಲಿ ಸಂತ್ರಸ್ತೆಯ ಜೊತೆಗೆ ಆಕೆಯ ಸೋದರ ಮತ್ತು ಆಕೆ ಕಲಿಯುತ್ತಿರುವ ಕಾಲೇಜಿನ ಹೆಸರುಗಳನ್ನೂ ಬಹಿರಂಗಗೊಳಿಸಿತ್ತು.

ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಲೈಂಗಿಕ ದೌರ್ಜನ್ಯದ ಬಲಿಪಶುಗಳ ಗುರುತುಗಳನ್ನು ಎಫ್‌ಐಆರ್,ನ್ಯಾಯಾಲಯದ ದಾಖಲೆಗಳು ಅಥವಾ ಮಾಧ್ಯಮಗಳಲ್ಲಿ ಬಹಿರಂಗೊಳಿಸುವಂತಿಲ್ಲ. ಇದರ ಉಲ್ಲಂಘನೆಯು ಶಿಕ್ಷಾರ್ಹ ಅಪರಾಧವಾಗಿದೆ. ಈ ಹಿನ್ನೆಲೆಯಲ್ಲಿ ತಿರುಚ್ಚಿಯ ಇಳಮುಗಿಲ್ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News