ನ್ಯೂಝಿಲ್ಯಾಂಡ್ ಹತ್ಯಾಕಾಂಡ: ಕೋರ್ಟಿಗೆ ಹಾಜರಾದ ಉಗ್ರ ಬ್ರೆಂಟನ್

Update: 2019-03-16 05:39 GMT

 ಕ್ರೈಸ್ಟ್‌ಚರ್ಚ್, ಮಾ.15: ನ್ಯೂಝಿಲ್ಯಾಂಡ್‌ನಲ್ಲ್ಲಿ ಶುಕ್ರವಾರ ಎರಡು ಮಸೀದಿಗಳ ಮೇಲೆ ಗುಂಡಿನ ಸುರಿಮಳೆಗರೆದು 49 ಮಂದಿ ಅಮಾಯಕರನ್ನು ಬಲಿ ಪಡೆದ ಘಟನೆಗೆ ಸಂಬಂಧಿಸಿ ಪ್ರಮುಖ ಶಂಕಿತ ಆಸ್ಟ್ರೇಲಿಯದ ಪ್ರಜೆ ಬ್ರೆಂಟನ್ ಹ್ಯಾರಿಸನ್ ಟ್ಯಾರಂಟ್ ವಿರುದ್ಧ ಹತ್ಯೆ ಕೇಸ್ ದಾಖಲಾಗಿದೆ.

28ರ ಹರೆಯದ ಬ್ರೆಂಟನ್ ಹ್ಯಾರಿಸನ್‌ನನ್ನು ಶನಿವಾರ ಬೆಳಗ್ಗೆ ಕ್ರೈಸ್ಟ್‌ಚರ್ಚ್ ಜಿಲ್ಲಾ ಕೋರ್ಟಿಗೆ ಹಾಜರುಪಡಿಸಲಾಗಿದೆ. ಇನ್ನಿಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು ಅವರ ಮೇಲೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ.

    ಜಾಮೀನು ಅರ್ಜಿ ಸಲ್ಲಿಸಲು ಬ್ರೆಂಟನ್‌ಗೆ ಅವಕಾಶವಿಲ್ಲದ ಕಾರಣ ಕಸ್ಟಡಿಯಲ್ಲೇ ಉಳಿಯಲಿದ್ದು, ಎ.5 ರಂದು ಕ್ರೈಸ್ಟ್‌ಚರ್ಚ್ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಹಾಜರಾಗಲಿದ್ದಾನೆ.

 ಬ್ರೆಂಟನ್ ಕೈದಿ ಧರಿಸುವ ಬಿಳಿಬಣ್ಣದ ಬಟ್ಟೆ, ಕೈಕೋಳ ಹಾಗೂ ಬರಿಗಾಲಲ್ಲಿ ನ್ಯಾಯಾಲಯದಲ್ಲಿ ಕಾಣಿಸಿಕೊಂಡ. ಆತ ಯಾರ ಬಳಿಯೂ ಮಾತನಾಡುತ್ತಿರಲಿಲ್ಲ.

  ಬ್ರೆಂಟನ್ ನ್ಯಾಯಾಲಯದಿಂದ ಹೊರಹೋದ ಬಳಿಕ ಮಾತನಾಡಿದ ನ್ಯಾಯಾಧೀಶರು, ಈ ಕ್ಷಣದಲ್ಲಿ ಬ್ರೆಂಟನ್ ಗೆ ಹತ್ಯೆ ಆರೋಪ ಹೊರಿಸಲಾಗುವುದು. ಇನ್ನಷ್ಟು ಆರೋಪಗಳನ್ನು ನಿರೀಕ್ಷಿಸಬಹುದು ಎಂದರು.

 ಇದಕ್ಕೂ ಮೊದಲು ಮಾತನಾಡಿದ ನ್ಯೂಝಿಲೆಂಡ್ ಪೊಲೀಸ್ ಆಯುಕ್ತ ಮೈಕ್ ಬುಶ್,ಬ್ರೆಂಟನ್ ವಿರುದ್ಧ ಮೊದಲಿಗೆ ಹತ್ಯೆ ಕೇಸ್ ದಾಖಲಿಸಲಾಗಿದ್ದು, ಇತರ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದರು.

 ಭದ್ರತೆಯ ಹಿತದೃಷ್ಟಿಯಿಂದ ಕ್ರೈಸ್ಟ್‌ಚರ್ಚ್ ಕೋರ್ಟ್‌ನ್ನು ಸಾರ್ವಜನಿಕರ ಪ್ರವೇಶಕ್ಕೆ ನ್ಯೂಝಿಲ್ಯಾಂಡ್ ಪೊಲೀಸ್ ನಿರ್ಬಂಧಿಸಿದ್ದು, ಮಾಧ್ಯಮಗಳು ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News