ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತ ಮೂವರು ಬೆಳಗಾವಿ ಚಿತ್ರಮಂದಿರಕ್ಕೆ ಪೆಟ್ರೋಲ್ ಬಾಂಬ್ ಎಸೆದಿದ್ದರು

Update: 2019-03-16 07:27 GMT

ಬೆಂಗಳೂರು, ಮಾ.16: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಬೆಳಗಾವಿ ನಗರದಲ್ಲಿ ಜನವರಿ 2018ರಲ್ಲಿ ಪದ್ಮಾವತ್ ಚಿತ್ರ ಪ್ರದರ್ಶನ ನಡೆಸುತ್ತಿದ್ದ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ.

ಭರತ್ ಕುರ್ನೆ (28), ಸುಧನ್ವ ಗೊಂಢಲೇಕರ್ (42) ಹಾಗೂ ಶರದ್ ಕಲಸ್ಕರ್ (26) ಇವರುಗಳನ್ನು ಗೌರಿ ಲಂಕೇಶ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಕಳೆದ ವರ್ಷ ಬಂಧಿಸಿತ್ತು. ಇದೀಗ ಮಹಾರಾಷ್ಟ್ರ ಮತ್ತು ಬೆಂಗಳೂರಿನ ಕಾರಾಗೃಹಗಳಲ್ಲಿರುವ ಇವರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಬೆಳಗಾವಿ ಪೊಲೀಸರು ಕೋರಿದ್ದಾರೆ.

ಬೆಳಗಾವಿಯ ಪ್ರಕಾಶ್ ಚಿತ್ರಮಂದಿರದ ಮೇಲೆ ಜನವರಿ 25, 2018ರಂದು ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣದ ಮರು ತನಿಖೆಗೆ ಅಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬೆಳಗಾವಿ ಪೊಲೀಸರಿಗೆ ಈ ವರ್ಷದ ಜನವರಿಯಲ್ಲಿ ಅನುಮತಿಸಿತ್ತು.

ಕುರ್ನೆ ಮತ್ತು ಗೊಂಢಲೇಕರ್ ಶಿವ ಪ್ರತಿಷ್ಠಾನ್ ಹಿಂದುಸ್ತಾನ್ ಸಂಘಟನೆಗೆ ಸೇರಿದವರೆನ್ನಲಾಗಿದ್ದರೆ, ಕಲಸ್ಕರ್ ಗೋವಾ ಮೂಲದ ಸನಾತನ ಸಂಸ್ಥಾಗೆ ಸೇರಿದವನು.

ಜನರು 'ಪದ್ಮಾವತ್' ಸಿನೆಮಾ ವೀಕ್ಷಿಸಲೆಂದು ಚಿತ್ರಮಂದಿರದ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದಾಗ ಎರಡು ಪೆಟ್ರೋಲ್ ಬಾಂಬುಗಳನ್ನು ಎಸೆದ ಕಾರಣ ಜನರೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದರಲ್ಲದೆ ಪ್ರದರ್ಶನ ರದ್ದು ಪಡಿಸಲಾಗಿತ್ತು.

ಆರಂಭದಲ್ಲಿ ಬೆಳಗಾವಿ ಪೊಲೀಸರು ಮೂವರು ಸ್ಥಳೀಯರನ್ನು ಬಂಧಿಸಿ ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ ಲಂಕೇಶ್ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿಗೆ ಮೂವರು ಆರೋಪಿಗಳು ಬೆಳಗಾವಿ ಪ್ರಕರಣದಲ್ಲೂ ಬೇಕಾದವರೆಂದು ತಿಳಿದು ಬಂದಿತ್ತು.

ಸನಾತನ ಸಂಸ್ಥಾದ ಹಿಂದು ಜನಜಾಗೃತಿ ಸಮಿತಿಯ ಮಾಜಿ ಸಂಚಾಲಕ ಹಾಗೂ ತಮ್ಮ ನಾಯಕ ಅಮೋಲ್ ಕಾಳೆ ತಮ್ಮನ್ನು ಚಿತ್ರಮಂದಿರದ ಮೇಲೆ ದಾಳಿ ನಡೆಸಲು ನಿಯೋಜಿಸಿದ್ದಾಗಿ ಕಲಸ್ಕರ್ ಹಾಗೂ ಸುಧನ್ವ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದರು. ಈ ದಾಳಿಯ ಹಿಂದೆ ಸುಧನ್ವ ಪ್ರಮುಖ ಪಾತ್ರ ವಹಿಸಿದ್ದನೆಂದೂ ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News