ಸಂತ್ರಸ್ತರಿಗೆ 'ನಿಮ್ಮ ಜೊತೆ ನಾವಿದ್ದೇವೆ' ಎಂದ ನ್ಯೂಝಿಲ್ಯಾಂಡ್ ಜನತೆ

Update: 2019-03-16 09:53 GMT

ಕ್ರೈಸ್ಟ್ ಚರ್ಚ್, ಮಾ.16: ನ್ಯೂಝಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಗರದ ಎರಡು ಮಸೀದಿಗಳ ಮೇಲೆ ಶುಕ್ರವಾರ ನಡೆದ ಗುಂಡಿನ ದಾಳಿ ಇಡೀ ಪ್ರಪಂಚವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. 49 ಮಂದಿ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿರುವ ಈ ಘಟನೆಯಿಂದ ನ್ಯೂಝಿಲ್ಯಾಂಡ್ ನ ಜನರು ಆಘಾತಕ್ಕೊಳಗಾಗಿದ್ದು, ಸಂತ್ರಸ್ತರ ಕುಟುಂಬಗಳ ಜತೆಗೆ ನಾವಿದ್ದೇವೆ ಎಂದು ಹೇಳಿದ್ದಾರೆ.

ನಗರದ ಬೊಟ್ಯಾನಿಕಲ್ ಗಾರ್ಡನ್ ಎದುರು ಜನರಿರಿಸಿರುವ ಹೂವುಗಳು, ಕಾರ್ಡ್, ಆಟಿಕೆಗಳು ಹಾಗೂ ಹಲವರು ತಮ್ಮ ಫೋನ್ ನಂಬರುಗಳನ್ನು ಬರೆದಿರುವ ಚೀಟಿಗಳನ್ನೂ ಅಲ್ಲಿಟ್ಟು ತಾವು ಸಂತ್ರಸ್ತ ಕುಟುಂಬಗಳಿಗೆ ಆಧಾರವಾಗಿದ್ದೇವೆ ಎಂಬುದನ್ನು ತೋರ್ಪಡಿಸಿಕೊಂಡಿದ್ದಾರೆ.

``ಸೋ ಸಾರಿ, ಇದು ನಾವಲ್ಲ'' ಎಂಬ ಭಾವನಾತ್ಮಕ ಸಂದೇಶವನ್ನೂ ನಾಗರಿಕರೊಬ್ಬರು ಕಾರ್ಡ್ ಒಂದರಲ್ಲಿ ಬರೆದಿದ್ದಾರೆ. ``ಅವರು ಯಾವತ್ತೂ ಗೆಲ್ಲುವುದಿಲ್ಲ, ಯಾವತ್ತೂ ಪ್ರೀತಿಯನ್ನೇ ಆರಿಸಿ'' ಎಂಬ ಇನ್ನೊಂದು ಸಂದೇಶವನ್ನೂ ಹೂದೋಟದ ನಡೆಯುವ ಹಾದಿಯಲ್ಲಿ ಚಾಕ್ ಬಳಸಿ ಕೆಲವರು ಬರೆದಿದ್ದಾರೆ.

``ನಾವು ಈ ದೇಶವನ್ನು ಯಾವತ್ತೂ ಪ್ರೀತಿಸುತ್ತೇವೆ,'' ಎಂದು  ಸುಮಾರು ಏಳು ಜನರು ಗುಂಡಿನ ದಾಳಿಯಲ್ಲಿ ಸಾವಿಗೀಡಾದ ಲಿನ್‍ವುಡ್ ಮಸೀದಿಯ ಇಮಾಮ್ ಅಬ್ದುಲ್ ಹಲೀಂ ಹೇಳಿದ್ದಾರಲ್ಲದೆ, ಈ ದುಃಖಕರ ಸನ್ನಿವೇಶದಲ್ಲಿ ಸಮಾಜವನ್ನು ಬೆಂಬಲಿಸಿದ ಎಲ್ಲರಿಗೂ ಆಭಾರಿ ಎನ್ನುತ್ತಾರೆ. ``ಏನೇ ಮಾಡಿದರೂ ಉಗ್ರರು ನಮ್ಮ ಆತ್ಮವಿಶ್ವಾಸವನ್ನು ಮುಟ್ಟಲು ಸಾಧ್ಯವಿಲ್ಲ' ಎಂದೂ ಅವರು ಭಾವುಕರಾಗಿ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News