ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಿ: ಬಿ.ಟಿ.ಲಲಿತಾನಾಯಕ್

Update: 2019-03-16 15:47 GMT

ಬೆಂಗಳೂರು, ಮಾ.16: ಕೋಮುವಾದ ಮನುಷ್ಯನನ್ನು ದೈಹಿಕವಾಗಿ ಕೊಲ್ಲಬಹುದೇ ಹೊರತು ಸೈದ್ಧಾಂತಿಕವಾಗಿ ಕೊಲ್ಲಲು ಸಾಧ್ಯವಿಲ್ಲವೆಂದು ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ತಿಳಿಸಿದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ವತಿಯಿಂದ ಶಿವಮೊಗ್ಗದ ಮುಸ್ಲಿಮ್ ಹಾಸ್ಟೆಲ್ ಮೈದಾನದಲ್ಲಿ ಆಯೋಜಿಸಿದ್ದ ಗರ್ಲ್ಸ್ ಕಾನ್ಫರೆನ್ಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಶಾಲಾ ಕಾಲೇಜುಗಳಿಂದ ಕಲಿಯುವುದು ಮಾತ್ರವಲ್ಲ ಸಮಾಜದಿಂದಲೂ ಬಹಳ ಕಲಿಯಬೇಕಾಗಿದೆ ಎಂದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಅತಿಯಾ ಫಿರ್ದೌಸ್ ಮಾತನಾಡಿ, ಕೇಂದ್ರ ಸರಕಾರ ಕಳೆದ 5 ವರ್ಷದಲ್ಲಿ ಚುನಾವಣೆಗೂ ಮುನ್ನ ನೀಡಿದ್ದ ಯಾವುದೇ ಭರವಸೆಗಳನ್ನು ಪೂರೈಸಲಿಲ್ಲ. ಇದನ್ನು ಜನತೆಗೆ ಮನವರಿಕೆ ಮಾಡಿಕೊಡುವ ಮೂಲಕ ಕೋಮುವಾದಿಗಳನ್ನು ಈ ಬಾರಿ ಅಧಿಕಾರದಿಂದ ದೂರವಿಡಲು ವಿದ್ಯಾರ್ಥಿಗಳು ಶ್ರಮಿಸಬೇಕಿದೆ ಎಂದು ತಿಳಿಸಿದರು.

ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಫಯಾಝ್ ದೊಡ್ಡಮನೆ ಮಾತನಾಡಿ, ಜಗತ್ತಿನಲ್ಲಿ ಭಾರತ ಅತ್ಯಂತ ಕೆಟ್ಟದಾಗಿ ಚಿತ್ರಣಗೊಳ್ಳುತ್ತಿದೆ. ಅಲ್ಲದೆ, ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡಾ ದೇಶದ ಪ್ರಧಾನ ಮಂತ್ರಿಯನ್ನು ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಟೀಕಿಸುತ್ತಿರಲು ಕಾರಣ ಅವರೇ ಒಪ್ಪಿಕೊಂಡಿರುವ ಫ್ಯಾಶಿಸ್ಟ್ ಸಿದ್ಧಾಂತವಾಗಿದೆ ಎಂದರು.

ವುಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯಾಧ್ಯಕ್ಷೆ ಶಾದಾ ತಸ್ನೀಮ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಉಪಾಧ್ಯಕ್ಷೆ ಮುರ್ಶಿದಾ ಬಾನು ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಸ್ರಿಯಾ ಎ.ಎಸ್, ವರ್ಲ್ಡ್ ವುಮೆನ್ ಕರಾಟೆ ಫೆಡರೇಶನ್ ಸದಸ್ಯೆ ಸಾನಿಯಾ ಸುಲ್ತಾನ ಹಾಗೂ ರಾಜ್ಯ ಉಪಾಧ್ಯಕ್ಷ ಆರಿಫ್ ಶಿವಮೊಗ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News