ಭಾರತಕ್ಕೆ ಗೆಲುವಿನ ಲಯ ಮುಂದುವರಿಸುವ ವಿಶ್ವಾಸ

Update: 2019-03-16 18:07 GMT

ಬೀರತ್‌ನಗರ್(ನೇಪಾಳ), ಮಾ.16: ಆರಂಭಿಕ ಪಂದ್ಯದಲ್ಲಿ ಅರ್ಧಡಝನ್ ಗೋಲುಗಳ ಮೂಲಕ ಮಾಲ್ಡಿವ್ಸ್ ತಂಡಕ್ಕೆ ಸೋಲಿನ ಪಾಠ ಕಲಿಸಿದ್ದ ಭಾರತ ಮಹಿಳಾ ತಂಡ, ಸ್ಯಾಫ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನ ತನ್ನ ಎರಡನೇ ಪಂದ್ಯದಲ್ಲಿ ರವಿವಾರ ಶ್ರೀಲಂಕಾ ತಂಡವನ್ನು ಎದುರುಗೊಳ್ಳಲಿದೆ. ಈ ಪಂದ್ಯವನ್ನೂ ಗೆದ್ದು ಬಿ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಪಡೆಯುವತ್ತ ಚಿತ್ತ ಹರಿಸಲಿದೆ ಭಾರತ.

‘‘ಮೊದಲ ಪಂದ್ಯದ ಬಳಿಕ ಮೂರು ದಿನಗಳ ವಿರಾಮ ಪಡೆದಿರುವ ನಮ್ಮ ಆಟಗಾರ್ತಿಯರು ಎರಡನೇ ಪಂದ್ಯಕ್ಕೆ ಸಂಪೂರ್ಣ ಸಿದ್ಧವಾಗಿದ್ದು ಮುನ್ನಡೆಯಲು ಕಾತರರಾಗಿದ್ದಾರೆ’’ ಎಂದು ಭಾರತ ತಂಡದ ಮುಖ್ಯ ಕೋಚ್ ಮಾಯ್ಮೋಲ್ ರಾಕಿ ಹೇಳಿದ್ದಾರೆ.

ಮೊದಲ ಪಂದ್ಯದ ನಂತರ ಇಬ್ಬರು ಆಟಗಾರ್ತಿಯರಿಗೆ ಗಾಯದ ಸಮಸ್ಯೆ ಕಾಡಿತ್ತು. ಆದರೆ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಆಟಗಾರ್ತಿಯರ ನೈತಿಕ ಮಟ್ಟವನ್ನು ಉನ್ನತವಾಗಿಡುವುದು ಮತ್ತು ಅಂಗಣದಲ್ಲಿ ಕೆಲವು ತಂತ್ರಗಳನ್ನು ಅನುಸರಿಸುವುದರ ಕುರಿತು ಕೋಚ್ ಹೆಚ್ಚಿನ ಗಮನಹರಿಸಿದ್ದಾರೆ.

‘‘ತವರಿನಿಂದ ಹೊರಗೆ ಆಡುವುದು ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಪ್ರಮುಖ ಸಮಸ್ಯೆಯಾಗಿರುವ ತಾಪಮಾನ ಬದಲಾವಣೆಯ ಸಮಸ್ಯೆಯಿಂದ ಆಟಗಾರ್ತಿಯರು ಹೊರಬರಬೇಕಿದೆ. ಟರ್ಕಿಶ್ ಮಹಿಳಾ ಕಪ್‌ನಲ್ಲಿ ಪಾಲ್ಗೊಂಡು ದಿಲ್ಲಿಗೆ ಮರಳಿದ್ದ ತಂಡ ಸದ್ಯ ನೇಪಾಳದ ಪ್ರವಾಸದಲ್ಲಿದೆ. ಟರ್ಕಿಯಲ್ಲಿ ತಂಪಾದ ವಾತಾವರಣವಿದ್ದರೆ ಬೀರತ್‌ನಗರದಲ್ಲಿ ಭಾರೀ ತಾಪಮಾನವಿದೆ. ಆದರೆ ನಾವು ಈ ಹವಾಗುಣಕ್ಕೆ ಹೊಂದಿಕೊಂಡಿದ್ದೇವೆ’’ ಎಂದು ಕೋಚ್ ಮಾಯ್ಮೋಲ್ ಹೇಳಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ತಂಡಗಳು ಮಾಲ್ಡಿವ್ಸ್ ವಿರುದ್ಧ ಗೆದ್ದು ಸದ್ಯ 3 ಅಂಕಗಳನ್ನು ಹೊಂದಿವೆ. 2016ರ ದಕ್ಷಿಣ ಏಶ್ಯ ಗೇಮ್ಸ್ ನಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳಲ್ಲಿ ಭಾರತ 5-0 ಗೋಲುಗಳ ಭರ್ಜರಿ ಜಯ ಸಾಧಿಸಿ ಬೀಗಿತ್ತು.

►ಪಂದ್ಯದ ಸಮಯ: ಮಧ್ಯಾಹ್ನ 2.45

►ಸ್ಥಳ: ಶಹೀದ್ ಕ್ರೀಡಾಂಗಣ ರಂಗಶಾಲಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News