ಶತಕ ವಂಚಿತ ರಹಮತ್ ಶಾ: ಅಫ್ಘಾನ್‌ಗೆ ದಿನದ ಗೌರವ

Update: 2019-03-16 18:16 GMT

ಡೆಹ್ರಾಡೂನ್, ಮಾ.16: ಅಫ್ಘಾನಿಸ್ತಾನ ಹಾಗೂ ಐರ್ಲೆಂಡ್ ತಂಡಗಳ ಮಧ್ಯೆ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಅಫ್ಘಾನಿಸ್ತಾನ ತಂಡ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 314 ರನ್ ಗಳಿಸಿದೆ. ದ್ವಿತೀಯ ಇನಿಂಗ್ಸ್‌ನಲ್ಲಿ ಐರ್ಲೆಂಡ್ ತಂಡದ ಒಂದು ವಿಕೆಟ್‌ನ್ನೂ ಅಫ್ಘಾನ್ ಪಡೆದಿದೆ.

ಶನಿವಾರ ಎರಡನೇ ದಿನದಾಟವನ್ನು 2 ವಿಕೆಟ್ ನಷ್ಟಕ್ಕೆ 90 ರನ್‌ಗಳೊಂದಿಗೆ ಮುಂದುವರಿಸಿದ ಅಫ್ಘಾನ್ ತಂಡ ರಹಮತ್ ಶಾ (98) ಅವರ ಭರ್ಜರಿ ಆಟದಿಂದ ಗಮನ ಸೆಳೆಯಿತು. ಆದರೆ ಶಾ ಶತಕವಂಚಿತರಾದದ್ದು ತಂಡಕ್ಕೆ ನಿರಾಸೆ ತರಿಸಿತು. ಮಧ್ಯಮ ಕ್ರಮಾಂಕದಲ್ಲಿ ಹಶ್ಮತುಲ್ಲಾ ಶಾಹಿದಿ (61) ಹಾಗೂ ನಾಯಕ ಅಸ್ಗರ್ ಅಫ್ಘನ್ (67) ಅರ್ಧಶತಕಗಳನ್ನು ಗಳಿಸುವ ಮೂಲಕ ತಂಡದ ಬ್ಯಾಟಿಂಗ್ ಗೆ ಭಾರೀ ಬಲ ತುಂಬಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಅಫ್ಘಾನ್ ತಂಡ ದಿಢೀರ್ ಕುಸಿತ ಕಂಡಿತು. ಒಂದು ಹಂತದಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದ್ದ ತಂಡ ಬೃಹತ್ ಮೊತ್ತದತ್ತ ಮುಖ ಮಾಡಿತ್ತು. 90 ರನ್‌ಗಳ ಅಂತರದಲ್ಲಿ ಇನ್ನುಳಿದ 6 ವಿಕೆಟ್ ಕಳೆದುಕೊಂಡು ಸ್ಪರ್ಧಾತ್ಮಕ ಮೊತ್ತಕ್ಕೆ ತೃಪ್ತಿಪಟ್ಟಿತು. ಐರ್ಲೆಂಡ್ ಪರ ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದ ಸ್ಟುವರ್ಟ್ ಥಾಂಪ್ಸನ್‌ಗೆ (28ಕ್ಕೆ 3) ಜಾರ್ಜ್ ಡಾಕ್ರೆಲ್, ಜೇಮ್ಸ್ ಕ್ಯಾಮರೂನ್ ಡೌ, ಆ್ಯಂಡಿ ಮೆಕ್‌ಬ್ರೈನ್ ತಲಾ 2 ವಿಕೆಟ್ ಪಡೆದು ಸಾಥ್ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ 142 ರನ್‌ಗಳ ಭಾರೀ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಐರ್ಲೆಂಡ್ 22 ರನ್ ಗಳಿಸಿ ಮೊದಲ ವಿಕೆಟ್ ಕಳೆದುಕೊಂಡಿದೆ. ಎದುರಾಳಿ ತಂಡದ ಮೊದಲ ಇನಿಂಗ್ಸ್ ಸ್ಕೋರ್‌ನ ದಾಟಲು ಇನ್ನೂ 120 ರನ್ ಗಳಿಸಬೇಕಿದೆ ಐರ್ಲೆಂಡ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News