ಐಪಿಎಲ್‌ನ ಪೂರ್ಣ ವೇಳಾಪಟ್ಟಿ ಮಾ.18ರಂದು ಬಿಡುಗಡೆ ಸಾಧ್ಯತೆ

Update: 2019-03-16 18:20 GMT

ಹೊಸದಿಲ್ಲಿ, ಮಾ.16: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 12ನೇ ಆವೃತ್ತಿಯು ಮಾ.23ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ಆದರೆ ಬಿಸಿಸಿಐ ಕೇವಲ ಎ.5ರವರೆಗಿನ ಕೇವಲ 17 ಪಂದ್ಯಗಳ ಅರ್ಧ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೋಮವಾರ ಸುಪ್ರೀಂಕೋರ್ಟ್ ನೇಮಿಸಿದ ಆಡಳಿತಗಾರರ ಸಮಿತಿ (ಸಿಒಎ) ಸಭೆ ನಡೆಯಲಿದ್ದು ಈ ವೇಳೆ ಐಪಿಎಲ್‌ನ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಿಸಿಸಿಐನ ಬಲ್ಲ ಮೂಲಗಳು ಹೊಸ ಬೆಳವಣಿಗೆಯ ಕುರಿತು ಮಾತನಾಡಿದ್ದು, ಮಾ.18ರಂದು ಎಲ್ಲ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿವೆ.

ಐಪಿಎಲ್‌ನ ಮೊದಲ ಭಾಗದಲ್ಲಿ ಪ್ರತಿ ತಂಡಗಳು ಕನಿಷ್ಠ 4 ಪಂದ್ಯಗಳನ್ನು ಆಡಲಿದ್ದರೆ ಹೊಸ ಹೆಸರಿನೊಂದಿಗೆ ಕಣಕ್ಕಿಳಿಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಆರ್‌ಸಿಬಿ ತಂಡಗಳು ತಲಾ 5 ಪಂದ್ಯಗಳನ್ನು ಆಡಲಿವೆ. ಪ್ರತಿ ತಂಡಗಳು 2 ಪಂದ್ಯಗಳನ್ನು ತವರಿನಲ್ಲಿ ಆಡಲಿದ್ದರೆ ಇನ್ನೆರಡು ಪಂದ್ಯಗಳನ್ನು ಅನ್ಯ ಸ್ಥಳಗಳಲ್ಲಿ ಆಡಲಿದ್ದು, ಡೆಲ್ಲಿ ತಂಡ ಮೂರು ಪಂದ್ಯಗಳನ್ನು ತವರಿನಲ್ಲಿ ಹಾಗೂ ಎರಡು ಪಂದ್ಯ ಹೊರಗೆ ಆಡಲಿದ್ದು ಆರ್‌ಸಿಬಿ ಎರಡು ಪಂದ್ಯಗಳನ್ನು ತವರಿನಲ್ಲಿ ಹಾಗೂ ಮೂರು ಪಂದ್ಯಗಳನ್ನು ಅನ್ಯ ಸ್ಥಳಗಳಲ್ಲಿ ಆಡಲಿದೆ.

ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ- ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆಗಳ ಜೊತೆ ಬಿಸಿಸಿಐ ಹೊಂದಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಅವರನ್ನು ಸೋಮವಾರ ಮುಂಬೈನಲ್ಲಿ ಸಿಒಎ ಮುಖ್ಯಸ್ಥರು ಭೇಟಿ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News