ಬೆಂಗಳೂರು ತಂಡಕ್ಕೆ ಇತಿಹಾಸದ ಬಲ

Update: 2019-03-16 18:31 GMT

ಮುಂಬೈ, ಮಾ,16: ಇಲ್ಲಿಯ ಫುಟ್ಬಾಲ್ ಅರೆನಾದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಹಾಗೂ ಗೋವಾ ಫುಟ್ಬಾಲ್ ಕ್ಲಬ್‌ಗಳು ಮುಖಾಮುಖಿಯಾಗಲಿವೆ. ಐತಿಹಾಸಿಕ ದಾಖಲೆಗಳನ್ನು ಗಮನಿಸಿದಾಗ ಬೆಂಗಳೂರು ತಂಡ ಗೋವಾಗಿಂತ ಕೊಂಚ ಮುಂದಿದೆ.

ಪ್ಲೇ ಆಫ್‌ನ ಎರಡನೇ ಲೆಗ್‌ನಲ್ಲಿ ನಾರ್ಥ್‌ಈಸ್ಟ್ ಯುನೈಟೆಡ್ ಕ್ಲಬ್‌ನ್ನು 3-0 ಗೋಲುಗಳ ಅಂತರದಿಂದ ಮಣಿಸಿ ಫೈನಲ್ ಹಂತಕ್ಕೆ ತಲುಪಿರುವ ಬೆಂಗಳೂರು ತಂಡ, ಪ್ರಥಮ ಲೆಗ್‌ನಲ್ಲಿ ಅನುಭವಿಸಿದ 1-2 ಅಂತರದ ಸೋಲಿನಿಂದ ಚೇತರಿಸಿಕೊಂಡಿತ್ತು.

ಇನ್ನೊಂದೆಡೆ ಗೋವಾ ತಂಡವು ಎರಡನೇ ಲೆಗ್‌ನ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ತಂಡಕ್ಕೆ 0-1 ಗೋಲುಗಳಿಂದ ಸೋತರೂ ಉತ್ತಮ ಸರಾಸರಿ ಆಧಾರದಲ್ಲಿ ಫೈನಲ್ ತಲುಪಿದೆ. ಪ್ರಥಮ ಲೆಗ್‌ನಲ್ಲಿ 5-1ರಿಂದ ಗೆಲುವು ಕಂಡ ಕಾರಣ ಗೋವಾ ಅಂತಿಮ ಹಂತಕ್ಕೆ ಪ್ರವೇಶಿಸಿದೆ.

2015ರಲ್ಲಿ ಗೋವಾ ತಂಡ ರನ್ನರ್‌ಅಪ್ ಸ್ಥಾನ ಗಳಿಸಿದ್ದರೆ, ಕಳೆದ ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರು ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಾಕತಾಳೀಯವೆಂದರೆ ಎರಡೂ ತಂಡಗಳು ತಮ್ಮ ಫೈನಲ್ ಪಂದ್ಯಗಳಲ್ಲಿ ಚೆನ್ನೈಯನ್ ಎಫ್‌ಸಿ ವಿರುದ್ಧ ಸೋಲು ಕಂಡು ನಿರಾಶೆ ಅನುಭವಿಸಿದ್ದವು.

ಇತಿಹಾಸವನ್ನು ಗಮನಿಸಿದರೆ ಬೆಂಗಳೂರು ತಂಡ ಗೋವಾಗಿಂತ ಸ್ವಲ್ಪ ಮುಂದಿದ್ದಂತೆ ತೋರುತ್ತದೆ. ಉಭಯ ತಂಡಗಳು ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಬೆಂಗಳೂರು ಮೂರು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದರೆ ಕಳೆದ ಋತುವಿನಲ್ಲಿ ನಡೆದ ಒಂದು ಪಂದ್ಯದಲ್ಲಿ ಮಾತ್ರ ಗೋವಾ ನಿಕಟ ಪೈಪೋಟಿಯಲ್ಲಿ 4-3ರಿಂದ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಬೆಂಗಳೂರಿನ ಕೇವಲ 10 ಆಟಗಾರರು ಆಡಿದ್ದರು.

ಆದರೆ ಉತ್ತಮ ಲಯದಲ್ಲಿರುವ ಗೋವಾ ತಂಡವನ್ನು ಕಡೆಗಣಿಸುವಂತಿಲ್ಲ. ಈ ಋತುವಿನಲ್ಲಿ ಗರಿಷ್ಠ 16 ಗೋಲು ಗಳಿಸಿರುವ ಸ್ಟಾರ್ ಸ್ಟ್ರೈಕರ್ ಫೆರ್ರಾನ್ ಕೊರೊಮಿನಾಸ್ ಗೋವಾ ತಂಡದ ಪ್ರಮುಖ ಭರವಸೆಯಾಗಿದ್ದಾರೆ.

ಇನ್ನು ಬೆಂಗಳೂರು ತಂಡಕ್ಕೆ ತಾರಾ ಆಟಗಾರರಾದ ಸುನೀಲ್ ಚೆಟ್ರಿ ಹಾಗೂ ಮೈಕು ಆಸರೆಯಾಗಿದ್ದು, ಯಾವುದೇ ಹಂತದಲ್ಲಿ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ಉಳ್ಳವರಾಗಿದ್ದಾರೆ.

►ಪಂದ್ಯದ ಸಮಯ: ಸಂಜೆ 7:30

►ಸ್ಥಳ: ಮುಂಬೈ ಫುಟ್ಬಾಲ್ ಅರೆನಾ ಕ್ರೀಡಾಂಗಣ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News