ಹಾಫೀಜ್ ಸಯೀದ್ ಮಾಹಿತಿ ಪಿಟಿಐಗೆ ಸೋರಿಕೆ: ತನಿಖೆಗೆ ಆಗ್ರಹಿಸಿ ವಿಶ್ವಸಂಸ್ಥೆಗೆ ಪತ್ರ ಬರೆದ ಪಾಕ್

Update: 2019-03-17 17:37 GMT

ಇಸ್ಲಾಮಾಬಾದ್, ಮಾ.17: ತನ್ನ ಹೆಸರನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಯಿಂದ ತೆಗೆದುಹಾಕಬೇಕೆಂದು ಕೋರಿ ಜಮಾತುದ್ದವಾದ ವರಿಷ್ಠ ಹಾಫೀಝ್ ಸಯೀದ್‌ನ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ಮಾಹಿತಿ ಭಾರತೀಯ ಸುದ್ದಿಸಂಸ್ಥೆಗೆ ಪಿಟಿಐಗೆ ಬಹಿರಂಗಪಡಿಸಿರುವುದಕ್ಕೆ ಪಾಕಿಸ್ತಾನವು ಸಿಡಿಮಿಡಿಗೊಂಡಿದೆ. ಪಿಟಿಐಗೆ ಈ ಮಾಹಿತಿ ಹೇಗೆ ಲಭ್ಯವಾಯಿತೆಂಬ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ, ಅದು ವಿಶ್ವಸಂಸ್ಥೆಗೆ ಪತ್ರ ಬರೆದಿದೆ.

ವಿಶ್ವಸಂಸ್ಥೆಯಲ್ಲಿ ವಿಷಯವನ್ನು ಸುದ್ದಿಸಂಸ್ಥೆಯೊಂದು ಪ್ರಕಟಿಸಿರುವ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ದೇಶವೊಂದು ಪತ್ರ ಬರೆದಿರುವ ಅಪರೂಪದ ಪ್ರಕರಣ ಇದೆನ್ನಲಾಗಿದೆ.

‘‘ವಿಶ್ವಸಂಸ್ಥೆಯಲ್ಲಿನ ಪಾಕ್ ರಾಯಭಾರಿ ಮಲೀಹಾ ಲೋಧಿ ಅವರು ಕಳೆದ ವಾರ ವಿಸ್ವಸಂಸ್ಥೆಗೆ ಪತ್ರವೊಂದನ್ನು ಬರೆದು, ತನ್ನ ಹೆಸರನ್ನು ಜಾಗತಿಕ ಉಗ್ರರ ಪಟ್ಟಿಯಿಂದ ಕೈಬಿಡಬೇಕೆಂಬ ಹಾಫೀಝ್ ಸಯೀದ್ ಈ ತಿಂಗಳಾರಂಭದಲ್ಲಿ ಸಲ್ಲಿಸಿದ್ದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ಕುರಿತಾದ ಮಾಹಿತಿಯನ್ನು ಭದ್ರತಾ ಮಂಡಳಿಯ 15 ಮಂದಿ ಸದಸ್ಯರ ಸಮಿತಿಯು ಹೇಗೆ ಭಾರತದ ಸುದ್ದಿಸಂಸ್ಥೆ ಪಿಟಿಐಗೆ ಒದಗಿಸಿತೆಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಬೇಕೆಂದು ಕೋರಿದ್ದಾರೆ’’ ಎಂದು ಪಾಕ್ ಸರಕಾರದ ಮೂಲವೊಂದು ತಿಳಿಸಿದೆ.

ಜಾಗತಿಕ ಉಗ್ರರ ಪಟ್ಟಿಯಿಂದ ಕೈಬಿಡಲು ಕೋರಿ ಹಾಫೀಝ್ ಸಯೀದ್ ಸಲ್ಲಿಸಿದ್ದ ಮನವಿಯನ್ನು ವಿಶ್ವಸಂಸ್ಥೆ ತಿರಸ್ಕರಿಸಿರುವ ವರದಿಯನ್ನು ಪಿಟಿಐ ಮಾರ್ಚ್ 7ರಂದು ಪ್ರಕಟಿಸಿತ್ತು.

ಆದಾಗ್ಯೂ ಮಲಿಹಾ ಅವರು ತನ್ನ ಪತ್ರದಲ್ಲಿ ಪಿಟಿಐಯನ್ನು ಭಾರತದ ಅಧಿಕೃತ ಸುದ್ದಿಸಂಸ್ಥೆ ಎಂಬುದಾಗಿ ಬಣ್ಣಿಸಿದ್ದಾರೆ. ಮಾಜಿ ಪತ್ರಕರ್ತೆಯೂ ಆಗಿರುವ ಲೋಧಿ ಅವರು ತನ್ನ ಪತ್ರದ ಜೊತೆ ಪಿಟಿಐ ವರದಿಯನ್ನು ಒಳಗೊಂಡ ಸುದ್ದಿ ತುಣುಕುಗಳನ್ನು ಕೂಡಾ ಲಗತ್ತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News